ಬೆಂಗಳೂರು: ಬಿಬಿಎಂಪಿ ಸೇರಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಸಂಖ್ಯೆ ಒಂದು ಕೋಟಿ ದಾಟಿದೆ. 2025ರ ಜ.1ರ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 1,02,41,226 ಮತದಾರರ ಹೆಸರನ್ನು ಉಳಿಸಿಕೊಳ್ಳಲಾಗಿದೆ. ಈ ಪೈಕಿ 52,69,188 ಪುರುಷರು, 49,70,207 ಮಹಿಳೆಯರು ಹಾಗೂ 1,831 ತೃತೀಯ ಲಿಂಗಿ ಮತದಾರರಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಕರಡು ಪಟ್ಟಿ ಪ್ರಕಟಿಸಿದ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಚುನಾವಣಾ ಆಯೋಗದ ನಿಯಮಾವಳಿಯಂತೆ ಪ್ರತಿ ವರ್ಷ ನಡೆಸುವ ಮತದಾರರ ಪರಿಷ್ಕರಣ ಅನ್ವಯ ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ 1.02 ಕೋಟಿ ಮತದಾರರಿದ್ದಾರೆ. ಈ ವರ್ಷದ ಆರಂಭದಲ್ಲಿ 98.43 ಲಕ್ಷ ಮತದಾರರಿದ್ದು, ಈ ಪೈಕಿ 3.97 ಲಕ್ಷದಷ್ಟು ಹೆಚ್ಚಳವಾಗಿದೆ. ನವೆಂಬರ್‌ನಲ್ಲಿ ವಿಶೇಷ ಪರಿಷ್ಕರಣೆಗೆ ಅವಕಾಶವಿದ್ದು, ಮುಂಬರುವ ಜ.6ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಮತದಾರರ ಕರಡು ಪ್ರತಿಯನ್ನು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ಅವರ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಿಶೇಷ ನೊಂದಣಿ ಅಭಿಯಾನ:
ಮತದಾರರಿಗಾಗಿ ನವೆಂಬರ್ ತಿಂಗಳಿನಲ್ಲಿ ವಿಶೇಷ ನೊಂದಣಿ ಅಭಿಯಾನ ಕೈಗೊಳ್ಳಲಾಗಿದೆ. ನ.9, 10 ಹಾಗೂ ನ.23, 24ರಂದು ಪಾಲಿಕೆಯ ಕಂದಾಯ ಅಧಿಕಾರಿಗಳು/ಸಹ ಕಂದಾಯ ಅಧಿಕಾರಿಗಳು/ವಾರ್ಡ್ ಕಚೇರಿಗಳು/ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಇರಲಿದೆ. ಮುಖ್ಯವಾಗಿ 17 ವರ್ಷ ತುಂಬಿದವರು ಈಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೆ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗ ಸಂಖ್ಯೆಯಿಂದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆ ಆಗಬೇಕಿದ್ದಲ್ಲಿ ಮತ್ತು ಪಟ್ಟಿಯಿಂದ ಹೆಸರು ತೆಗೆದುಹಾಕಲು ಪ್ರತ್ಯೇಕ ಅರ್ಜಿಯನ್ನು ಬಳಸಬೇಕಿದೆ. ಜತೆಗೆ ಕರಡು ಪಟ್ಟಿಯಲ್ಲಿನ ಮಾಹಿತಿಗೆ ಆಕ್ಷೇಪಣೆ ಸಲ್ಲಿಸಲು ನ.28ರವರೆಗೆ ಅವಕಾಶ ಇರುತ್ತದೆ ಎಂದು ಸೆಲ್ವಮಣಿ ವಿವರಿಸಿದರು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ:
ಪ್ರಥಮ ಬಾರಿಗೆ ನೊಂದಾಯಿಸಿಕೊಳ್ಳುವ ಮತದಾರರು ಹಾಗೂ 2025ರ ಜ.1ಕ್ಕೆ 18 ವರ್ಷ ತುಂಬುವ ಯುವಕ, ಯುವತಿಯರು ಅರ್ಜಿ ನಮೂನೆ-6ನ್ನು ಆನ್‌ಲೈನ್ ಮೂಲಕ ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಕರಡು ಪಟ್ಟಿಯಲ್ಲಿನ ಮತದಾರರ ವಿವರ:
ಒಟ್ಟು ಮತದಾರರು - 1,02,41,226
ಪುರುಷರು- 52,69,188
ಮಹಿಳೆಯರು - 49,70,207
ತೃತೀಯ ಲಿಂಗಿ – 1,831
ಯುವ ಮತದಾರರು - 86,044
ಶತಾಯಿಷಿಗಳು - 4,852
ಅನಿವಾಸಿ ಭಾರತೀಯರು - 2,272
ಸೇವಾ ಮತದಾರರು - 1,708
ಅಂಗವಿಕಲ ಮತದಾರರು - 32,213
Post a Comment