ಮುಂಬೈ: 'ದಂಗಲ್' ಸಿನಿಮಾದ ಗಳಿಕೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿರುವ ಮಾಜಿ ಕುಸ್ತಿಪಟು, ಬಿಜೆಪಿ ನಾಯಕಿ ಬಬಿತಾ ಫೋಗಟ್, 'ಸಿನಿಮಾ ಸಾವಿರಾರು ಕೋಟಿ ಹಣ ಗಳಿಸಿದ್ದರೂ, ನಮ್ಮ ಕುಟುಂಬ ಪಡೆದಿರುವುದು ಕೇವಲ ₹1 ಕೋಟಿ ಮಾತ್ರ' ಎಂದಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಬಬಿತಾ, 'ಪ್ರಪಂಚದಾದ್ಯಂತ ಪ್ರದರ್ಶನ ಕಂಡಿದ್ದ 'ದಂಗಲ್' ಸಿನೆಮಾ ಸುಮಾರು ₹2 ಸಾವಿರ ಕೋಟಿ ಗಳಿಸಿತ್ತು' ಎಂದರು.
'ಅಮೀರ್ ಖಾನ್ ಅವರು ಚಿತ್ರದಲ್ಲಿ ನಟಿಸುವುದು ಖಚಿತವಾದ ಮೇಲೆ ಚಿತ್ರದಲ್ಲಿನ ಪಾತ್ರಗಳ ಹೆಸರನ್ನು ಬದಲಾಯಿಸುವಂತೆ ಅವರ ತಂಡ ಸಲಹೆ ನೀಡಿತ್ತು. ಆದರೆ, ನಮ್ಮ ತಂದೆ ಇದಕ್ಕೆ ಒಪ್ಪಿಗೆ ನೀಡಲಿಲ್ಲ' ಎಂದರು.
ಅಲ್ಪ ಮೊತ್ತ ಪಾವತಿಸಿರುವುದಕ್ಕೆ ಬೇಸರವಿದೆಯೇ ಎಂಬ ಪ್ರಶ್ನೆಗೆ, 'ನಾವು ಜನರ ಪ್ರೀತಿ ಮತ್ತು ಗೌರವನ್ನು ಗಳಿಸಬೇಕು ಎಂದು ನಮ್ಮ ತಂದೆ ಹೇಳುತ್ತಿದ್ದರು. ಹಣದ ವಿಷಯದಲ್ಲಿ ಯಾವುದೇ ಬೇಸರವಿಲ್ಲ' ಎಂದು ಹೇಳಿದರು.
ಹರಿಯಾಣ ಮೂಲದ ಕುಸ್ತಿಪಟು ಮಹಾವೀರ್ ಫೋಗಟ್ ಮತ್ತು ಅವರ ಮಕ್ಕಳಾದ ಬಬಿತಾ ಹಾಗೂ ಗೀತಾ ಫೋಗಟ್ ಅವರ ಜೀವನ ಕಥೆಯಾಧಾರಿತ 'ದಂಗಲ್' ಸಿನಿಮಾ 2016ರಲ್ಲಿ ಬಿಡುಗಡೆಗೊಂಡಿತ್ತು. ಚಿತ್ರದಲ್ಲಿ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಚಿತ್ರವು ಭಾರತದಾದ್ಯಂತ ಸುಮಾರು ₹387 ಕೋಟಿ ಗಳಿಸಿದ್ದು, ಚಿತ್ರದ ಹಕ್ಕುಗಳಿಗಾಗಿ ಫೋಗಟ್ ಕುಟುಂಬಕ್ಕೆ ₹80 ಲಕ್ಷ ಪಾವತಿಸಲಾಗಿತ್ತು ಎಂದು ಹಿಂದಿನ ಮಾಧ್ಯಮ ವರದಿಗಳು ಹೇಳಿವೆ.
Post a Comment