ಚೆನ್ನೈ: ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಗುಮ್ಮುಡಿಪೂಂಡಿಯಲ್ಲಿ ಶುಕ್ರವಾರ ರಾತ್ರಿ ಗೂಡ್ಸ್ ರೈಲೊಂದಕ್ಕೆ ಮೈಸೂರು-ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಪರಿಣಾಮ 13 ಬೋಗಿಗಳು ಹಳಿತಪ್ಪಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ.
ರಾತ್ರಿ ಸುಮಾರು 8.28ರ ವೇಳೆಗೆ ಘಟನೆ ನಡೆದಿದ್ದು, ಅಪಘಾತಕ್ಕೀಡಾಗುವ ವೇಳೆ ರೈಲು ಗಂಟೆಗೆ 75 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು ಎಂದು ದಕ್ಷಿಣ ರೈಲ್ವೆ ತಿಳಿಸಿದೆ. 8.27ಕ್ಕೆ ಪೊನ್ನೇರಿ ರೈಲು ನಿಲ್ದಾಣ ದಾಟಿದ್ದ ರೈಲಿಗೆ, ಕವರೈಪೆಟ್ಟೆ ನಿಲ್ದಾಣಕ್ಕೆ ಪ್ರವೇಶಿಸಿಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು.
'ನೀಡಿದ ಸಿಗ್ನಲ್ ಪ್ರಕಾರ ಮುಖ್ಯ ಮಾರ್ಗಕ್ಕೆ ಹೋಗುವ ಬದಲು, ಲೂಪ್ ಹಳಿಗೆ ಪ್ರವೇಶಿಸಿ, ಆ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದೆ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ' ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.
12-13 ಬೋಗಿಗಳು ಹಳಿ ತಪ್ಪಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿ ಶಾಮಕ ದಳವು ಬೆಂಕಿಯನ್ನು ನಂದಿಸಿದೆ. *19 ಮಂದಿ ಗಾಯಗೊಂಡಿದ್ದಾಗಿ ವರದಿ ಬಂದಿದೆ. ಗಂಭೀರವಾಗಿ ಗಾಯಗೊಂಡವರನ್ನು ಚೆನ್ನೈನ ಸ್ಟಾನ್ಸಿ ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರಿಗೆ ಪೊನ್ನೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ತಮಿಳುನಾಡು ಸರ್ಕಾರದ ಮೂಲಗಳು 'ಪ್ರಜಾವಾಣಿಗೆ' ತಿಳಿಸಿವೆ.
ತಿರುವಳ್ಳುವರ್ ಜಿಲ್ಲಾಧಿಕಾರಿ ಟಿ. ಪ್ರಭುಶಂಕರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಅಗ್ನಿಶಾಮಕ ವಾಹನಗಳನ್ನು ಸರ್ಕಾರ ನಿಯೋಜಿಸಿದೆ. ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳು ಗುಮ್ಮುಡಿಪೂಂಡಿಗೆ ತೆರಳುತ್ತಿದ್ದಾರೆ.
ಅಪಘಾತದಿಂದಾಗಿ ಚೆನ್ನೈ, ದೆಹಲಿ, ಕೋಲ್ಕತ್ತ, ಹೈದರಾಬಾದ್ ಮತ್ತು ನಾಗುರವನ್ನು ಇತರ ನಗರಗಳೊಂದಿಗೆ ಸಂಪರ್ಕಿಸುವ ಚೆನ್ನೈ-ವಿಜಯವಾಡ ವಿಭಾಗದಲ್ಲಿ ರೈಲು ಸೇವೆಗಳಲ್ಲಿ ಏರುಪೇರಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎಸ್. ಎಂ. ನಾಸರ್ ಅವರನ್ನು ಅಪಘಾತ ಸ್ಥಳಕ್ಕೆ ನಿಯೋಜಿಸಿದ್ದಾರೆ. ಸಂತ್ರಸ್ತ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಂಡವೊಂದು ಕಾರ್ಯನಿರ್ವಹಿಸುತ್ತಿದೆ.
'ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಕೋಚ್‌ಗಳನ್ನು ಹಳಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲಿದ್ದೇನೆ' ಎಂದು ಸ್ಟಾಲಿನ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್‌ನ ಎಲ್ಲಾ ಪ್ರಯಾಣಿಕರನ್ನು ಇಎಂಯು (ಇ.ವಿ ಕೋಚ್) ಮೂಲಕ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಅವರನ್ನು ಅವರ ಗಮ್ಯಸ್ಥಾನಗಳಿಗೆ ಕರೆದೊಯ್ಯಲು ಚೆನ್ನೈನಲ್ಲಿ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ರೈಲು ಅಪಘಾತದಿಂದಾಗಿ ಹಲವು ರೈಲುಗಳ ಮರ್ಗ ಬದಲಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡವರ ಮಾಹಿತಿ ದಕ್ಷಿಣ ರೈಲ್ವೆಯಿಂದ ಬಂದಿಲ್ಲ. ಆದರೆ ತಮಿಳುನಾಡು ಸರ್ಕಾರದ ಮೂಲದಿಂದ ಬಂದ ಮಾಹಿತಿ ಪ್ರಕಾರ 19 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Post a Comment