ತಮಿಳುನಾಡು: 'ಗಿಲ್ಲಿ' ಚಿತ್ರದ ಮೂಲಕ ನೇರವಾಗಿ ಸಿನಿಪ್ರಿಯರ ಅಂತರಾಳಕ್ಕೆ ನುಗ್ಗಿದ ತಮಿಳು ನಟ ದಳಪತಿ ವಿಜಯ್, ಇದೀಗ ರಾಜಕೀಯ ಪ್ರವೇಶಕ್ಕೆ ಸನ್ನದ್ಧರಾಗಿದ್ದಾರೆ. ಅಭಿಮಾನಿಗಳಿಂದ ದಳಪತಿ ಎಂಬ ಪಟ್ಟವನ್ನು ಸ್ವೀಕರಿಸಿದ ವಿಜಯ್ ಇದೀಗ ತಮ್ಮ ಸಿನಿ ವೃತ್ತಿಗೆ ಗುಡ್‌ಬೈ ಹೇಳಲು ಮುಂದಾಗಿದ್ದು, 2026ರಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಜನಸೇವೆ ಮಾಡಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇದೇ ಸಮಯದಲ್ಲಿ ವಿಜಯ್ ಅಭಿನಯಿಸಲಿರುವ ಕಡೆಯ ಸಿನಿಮಾ 'ದಳಪತಿ 69' ಚಿತ್ರಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ದಿಗ್ಗಜ ನಟರ ಸಮಾಗಮ ಇರಲಿದೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಇಂದು ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟ ದಳಪತಿ ವಿಜಯ್, ತಮಿಳುನಾಡಿನ ವಿಕ್ರವಾಂಡಿಯಲ್ಲಿ ಸಾರ್ವಜನಿಕ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಪ್ರಾರಂಭಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಉದ್ಘಾಟನಾ ಸಮಾವೇಶದಲ್ಲಿ ತಮ್ಮ ನೆಚ್ಚಿನ ನಾಯಕನನ್ನು ಕಣ್ಣುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೇ ಪಡಬೇಕಾಯಿತು. ಆ್ಯಕ್ಷನ್ ಸೀನ್‌ನಲ್ಲಿ ನೋಡುತ್ತಿದ್ದ ನಟನನ್ನು ಪ್ರಥಮ ಬಾರಿಗೆ ರಾಜಕೀಯ ವೇದಿಕೆಯಲ್ಲಿ ಕಂಡ ಅಭಿಮಾನಿಗಳು, ಘೋಷಣೆಗಳನ್ನು ಕೂಗುವ ಮುಖೇನ ಅವರಿಗೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.
ದಳಪತಿ ವಿಜಯ್ ಅವರ ರಾಜಕೀಯ ಭಾಷಣವನ್ನು ಕೇಳಲು ಜನಸಾಗರವೇ ಹರಿದುಬಂದಿದ್ದು, ಸದ್ಯ ಈ ದೃಶ್ಯಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ತಮ್ಮ ಪಕ್ಷದ ಧ್ವಜವನ್ನು ಹಾರಿಸಿದ ವಿಜಯ್, ಪಾರ್ಟಿಯ ಉದ್ದೇಶ ಹಾಗೂ ಮಹತ್ವದ ಗುರಿಯನ್ನು ತಿಳಿಸಿದರು. ನಟನ ಈ ನಡೆಗೆ ತಮಿಳು ಚಿತ್ರರಂಗದ ಸ್ಟಾರ್ ನಟ-ನಟಿಯರು ಸೇರಿದಂತೆ ಇತರೆ ಚಿತ್ರರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ, ಟ್ವಿಟ್ ಮಾಡಿ ಶುಭಹಾರೈಕೆಗಳನ್ನು ತಿಳಿಸಿದ್ದಾರೆ,
Post a Comment