ನವದೆಹಲಿ: ದೆಹಲಿಯ ಆಮ್ ಆದ್ಮ ಪಕ್ಷ (ಎಎಪಿ) ಹಾಗೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ರಾಜಕೀಯ ಕಾರಣಗಳಿಂದಾಗಿ 'ಆಯುಷ್ಮಾನ್ ಭಾರತ' ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪ್ರಧಾನಿ ಮೋದಿ ಅವರು ಇಂದು (ಮಂಗಳವಾರ) ಒಂಬತ್ತನೇ ಆಯುರ್ವೇದ ದಿನ ಮತ್ತು ಧನ್ವಂತರಿಯ ಜನ್ಮದಿನದ ಪ್ರಯುಕ್ತ ಆರೋಗ್ಯ ಕ್ಷೇತ್ರದ ₹12,850 ಕೋಟಿ ವೆಚ್ಚದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ.
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಅವರು, 'ದೇಶದಾದ್ಯಂತ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 'ಆಯುಷ್ಮಾನ್ ಭಾರತ' ಯೋಜನೆಯಡಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ' ಎಂದು ಅವರು ಪುನರುಚ್ಚರಿಸಿದ್ದಾರೆ.
'ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ 'ಆಯುಷ್ಮಾನ್ ಭಾರತ್' ಯೋಜನೆಯನ್ನು ಅನುಷ್ಠಾನಗೊಳಿಸದಿರುವುದರಿಂದ ಅಲ್ಲಿನ ಹಿರಿಯ ನಾಗರಿಕರಿಗೆ ಆರೋಗ್ಯ ಸೌಲಭ್ಯಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ' ಎಂದು ಮೋದಿ ಕಿಡಿಕಾರಿದ್ದಾರೆ.
ಪಂಚಕರ್ಮ ಆಸ್ಪತ್ರೆ, ಆಯುರ್ವೇದ ಔಷಧಾಲಯ, ಕ್ರೀಡಾ ಔಷಧ ಘಟಕ, ಕೇಂದ್ರ ಗ್ರಂಥಾಲಯ, ಐಟಿ ಮತ್ತು ಸ್ಟಾರ್ಟ್‌ಅಪ್ ಇನ್‌ಕ್ಯುಬೇಶನ್ ಸೆಂಟರ್ ಮತ್ತು 500 ಆಸನಗಳ ಆಡಿಟೋರಿಯಂ ಒಳಗೊಂಡಿರುವ ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಮೋದಿ ಉದ್ಘಾಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿಯವರು ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿಸಲು ಡೋನ್ ತಂತ್ರಜ್ಞಾನದ ಸೇವೆಗಳಿಗೂ ಚಾಲನೆ ನೀಡಿದ್ದಾರೆ. ಉತ್ತರಾಖಂಡದ ಏಮ್ಸ್-ರಿಷಿಕೇಶ, ತೆಲಂಗಾಣದ ಏಮ್ಸ್-ಬೀಬಿನಗರ, ಅಸ್ಸಾಂನ ಏಮ್ಸ್-ಗುವಾಹಟಿ, ಮಧ್ಯಪ್ರದೇಶದ ಏಮ್ಸ್-ಭೋಪಾಲ್, ರಾಜಸ್ಥಾನದ ಏಮ್ಸ್- ಜೋದ್‌ಪುರ, ಬಿಹಾರದ ಏಮ್ಸ್-ಪಟ್ನಾ, ಏಮ್ಸ್-ಬಿಲಾಸ್‌ಪುರ್, ಹಿಮಾಚಲ ಪ್ರದೇಶದ ಏಮ್ಸ್-ಬಿಲಾಸ್‌ಪುರ್ ಉತ್ತರ ಪ್ರದೇಶ, ಛತ್ತೀಸಗಢದ ಏಮ್ಸ್-ರಾಯಪುರ, ಆಂಧ್ರಪ್ರದೇಶದ ಏಮ್ಸ್- ಮಂಗಳಗಿರಿ ಮತ್ತು ಮಣಿಪುರದ ರಿಮ್ಸ್-ಇಂಫಾಲ್‌ನಲ್ಲಿ ಈ ಸೇವೆ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಮ್ಸ್ ರಿಷಿಕೇಶದಿಂದ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗೂ ಪ್ರಧಾನಿ ಚಾಲನೆ ನೀಡಿದ್ದಾರೆ. ಇದು ವೈದ್ಯಕೀಯ ಆರೈಕೆಯನ್ನು ತ್ವರಿತವಾಗಿ ತಲುಪಿಸಲು ಸಹಾಯ ಮಾಡಲಿದೆ.
ಲಸಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಮೂಲಕ ಗರ್ಭಿಣಿಯರು ಮತ್ತು ಶಿಶುಗಳಿಗೆ ಪ್ರಯೋಜನವಾಗುವ ಯು-ವಿನ್ ಪೋರ್ಟಲ್ ಅನ್ನು ಆರಂಭಿಸಲಾಗಿದೆ.
Post a Comment