ಇಂದು ವಿಜಯದಶಮಿ: ಐತಿಹಾಸಿಕ ಜಂಬೂ ಸವಾರಿಗೆ ಮೈಸೂರು ನಗರ ಸಜ್ಜು!
ಮೈಸೂರು : ಹತ್ತು ದಿನಗಳ ನಾಡಹಬ್ಬ ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ವಿಜಯ ದಶಮಿ ದಿನವಾದ ಇಂದು ತೆರೆ ಬೀಳಲಿದ್ದು, ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ತುದಿಗಾಲಲ್ಲಿ ನಿಂತಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ನಡೆಯುತ್ತಿದ್ದು, ರಾಜ್ಯದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸಲಾಗುತ್ತಿದೆ.ಐತಿಹಾಸಿಕ ಜಂಬೂ ಸವಾರಿಗೆ ಅಂತಿಮ ಅಂತದ ಸಿದ್ದತಾ ಕಾರ್ಯಗಳು ನಡೆಯುತ್ತಿವೆ. 750 ಕೆಜಿ ತೂಕದ ಅಂಬಾರಿಯಲ್ಲಿ ವಿರಾಜಮಾನಾಳದ ಅಧಿದೇವತೆ ಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತ 'ಅಭಿಮನ್ಯು' ನೇತೃತ್ವದ ಗಜಪಡೆ ಸಾಗಲಿದೆ. ಅಂಬಾ ವಿಲಾಸ ಅರಮನೆ ಆವರಣದ ಬಲರಾಮ ದ್ವಾರದ ಮೇಲೆ ಮಧ್ಯಾಹ್ನ 1-41ರಿಂದ 2-10 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ವಿಜಯ ದಶಮಿ ಮೆರವಣಿ ಆರಂಭವಾಗಲಿದೆ. ವಿವಿಧ ಜಿಲ್ಲೆಗಳ ಕಲಾವಿದರು ಅಥವಾ ಸಾಂಸ್ಕೃತಿಕ ತಂಡಗಳ ಪ್ರದರ್ಶನ, ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಬನ್ನಿಮಂಟಪದವರೆಗೂ ಸುಮಾರು 5 ಕಿ. ಲೋ. ವರೆಗೂ ಮೆರವಣಿಗೆ ಸಾಗಲಿದೆ. ವಿವಿಧ ಯೋಜನೆಗಳು ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸಂದೇಶ ಬಿಂಬಿಸುವ ವಿವಿಧ ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯ ಭಾಗವಾಗಲಿವೆ. ದಾರಿಯುದ್ದಕ್ಕೂ ಸಹಸ್ರಾರು ಜನರು ವೈಭವದ ಜಂಬೂ ಸವಾರಿಯನ್ನು ವೀಕ್ಷಿಸಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರ ಇತರೆ ಗಣ್ಯರು ಅಂಬಾರಿಯಲ್ಲಿ ಕೂತ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವರು. ಹಿಂದಿನ ದಿನಗಳಲ್ಲಿ ರಾಜನು ತನ್ನ ಸಹೋದರ ಮತ್ತು ಸೋದರಳಿಯನೊಂದಿಗೆ ಅಂಬಾರಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಜಯಚಾಮರಾಜೇಂದ್ರ ಒಡೆಯರ್ ಅಂಬಾರಿಯಲ್ಲಿ ಸವಾರಿ ಮಾಡಿದ ಮೈಸೂರಿನ ಕೊನೆಯ ರಾಜ ರಾಜರಾಗಿದ್ದರು.
Post a Comment