ಬೆಂಗಳೂರು, ಸೆ.30: ಚುನಾವಣಾ ಬಾಂಡ್ ಹೆಸರಲ್ಲಿ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಯಾ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಬೆಂಗಳೂರಿನ ತಿಲಕ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ಎಫ್‌ಐಆರ್ ರದ್ದು ಕೋರಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಸೋಮವಾರ ಬೆಳಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ತುರ್ತಾಗಿ ವಿಚಾರಣೆ ಕೋರಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಶರು, ಆರೋಪಿಗಳ ಪರ ವಕೀಲರ ಅಹವಾಲು ಆಲಿಸಿ ಮುಂದಿನ ವಿಚಾರಣೆಯನ್ನು ಅ.22ರ ವರೆಗೆ ಮುಂದೂಡಿದ್ದು, ಅಲ್ಲಿಯ ವರೆಗೆ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿದ್ದಾರೆ. ಈ ಮೂಲಕ, ಎಫ್‌ಐಆರ್ ಕಾರಣದಿಂದ ತೀವ್ರ ಮುಜುಗರ ಅನುಭವಿಸಿದ್ದ ಬಿಜೆಪಿ ನಾಯಕರಿಗೆ ಒಂದು ಹಂತದ ಗೆಲುವು ಸಿಕ್ಕಂತಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ಅಧ್ಯಕ್ಷ ಆದರ್ಶ ಆರ್. ಅಯ್ಯರ್ ಎಂಬವರು, ಚುನಾವಣಾ ಬಾಂಡ್ ಹೆಸರಲ್ಲಿ ಬಿಜೆಪಿ ನಾಯಕರು ಕಾರ್ಪೊರೇಟ್ ಕಂಪನಿಗಳಿಂದ ಎಂಟು ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಪಡೆದ ಮೋಸ ಮಾಡಿದ್ದಾರೆಂದು ಆರೋಪಿಸಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಖಾಸಗಿ ದೂರು ಪರಿಗಣಿಸಿ ಕೋರ್ಟ್ ಬೆಂಗಳೂರು ತಿಲಕ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಆದೇಶ ಮಾಡಿದ್ದನ್ನನುಸರಿಸಿ ಪೊಲೀಸರು ಬಿಜೆಪಿ ಪ್ರಮುಖರ ಮೇಲೆ ಕೇಸು ದಾಖಲಿಸಿದ್ದರು. ಕಳೆದ 2023ರ ಫೆಬ್ರವರಿ ತಿಂಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ನೀತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಚುನಾವಣಾ ಬಾಂಡ್ ಹೆಸರಲ್ಲಿ ಕಂಪನಿಗಳಿಂದ ಹಣ ಪಡೆದು ಜನರಿಗೆ ಮೋಸ ಮಾಡುತ್ತಿದ್ದೀರಿ, ಸಂವಿಧಾನದ ಅಭಿಪ್ರಾಯ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ಜನರ ಹಕ್ಕನ್ನು ಉಲ್ಲಂಘಿಸುತ್ತಿದ್ದೀರಿ. ಅಲ್ಲದೆ, ಹಣ ಪಡೆದಿರುವ ದಾಖಲೆಯನ್ನು ಬಹಿರಂಗಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜಕೀಯ ಪಕ್ಷಗಳಿಗೆ ಆದೇಶ ಮಾಡಿತ್ತು.
ಇತ್ತ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕೇಂದ್ರ ವಿತ್ತ ಸಚಿವರ ಮೇಲೆ ಎಫ್‌ಐಆರ್ ದಾಖಲಾಗಿದ್ದು ಬಿಜೆಪಿ ನಾಯಕರಿಗೆ ತೀವ್ರ ಇರಿಸು ಮುರಿಸು ತಂದಿತ್ತು. ಇದಲ್ಲದೆ, ನನ್ನ ರಾಜಿನಾಮೆ ಕೇಳೋ ಮೊದಲು ನಿರ್ಮಲಾ ಸೀತಾರಾಮನ್ ಅವರ ರಾಜಿನಾಮೆ ಪಡೆಯಲಿ ಎಂದು ಸಿದ್ದರಾಮಯ್ಯ ಕೌಂಟರ್ ಮಾಡಿದ್ದರು. ಇದೇ ವೇಳೆ, ದಕ್ಷಿಣ ಕನ್ನಡ, ಉಡುಪಿ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ಟಿಕೆಟ್ ಪಡೆಯಲು ನಳಿನ್ ಕುಮಾರ್ ಕಟೀಲು ತೀವ್ರ ಲಾಬಿ ನಡೆಸಿದ್ದಾರೆ. ಎಫ್‌ಐಆರ್ ನಲ್ಲಿ ಆರೋಪಿಯೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗೆ ಟಿಕೆಟ್ ಸಿಕ್ಕರೆ ಕಾಂಗ್ರೆಸಿಗೆ ಅಸ್ತ್ರವಾಗುತ್ತೆ ಎಂಬ ನೆಲೆಯಲ್ಲಿ ಪ್ರಕರಣ ರದ್ದು ಕೋರಿ ತುರ್ತಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ನಳಿನ್ ಕುಮಾರ್ ಅವರಿಗೂ ತಾತ್ಕಾಲಿಕ ಗೆಲುವು ಸಿಕ್ಕಂತಾಗಿದೆ.
Post a Comment