'ಆಪ್ ಸಬ್ ಕಿ ಆವಾಜ್': ಹೊಸ ರಾಜಕೀಯ ಪಕ್ಷ ಆರಂಭ

 ಬಿಹಾರದಲ್ಲಿ ಹೊಸ ರಾಜಕೀಯ ಪಕ್ಷ ಜನ್ಮ ತಾಳಿದೆ.


ಪಾಟ್ನಾ: 'ಆಪ್ ಸಬ್ ಕಿ ಆವಾಜ್' (ಎಎಸ್ಎ) ಎಂಬ ಹೊಸ ರಾಜಕೀಯ ಪಕ್ಷವು ದೇಶದಲ್ಲಿ ಜನ್ಮ ತಾಳಿದೆ. ಮಾಜಿ ಕೇಂದ್ರ ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಬಿಹಾರದಲ್ಲಿ ಈ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.

ಬಿಹಾರದ ಜನತೆಗೆ ಹೊಸ ರಾಜಕೀಯ ಪರ್ಯಾಯ ನೀಡುವ ಗುರಿಯೊಂದಿಗೆ ಪಕ್ಷ ಆರಂಭಿಸುತ್ತಿರುವುದಾಗಿ ಸಿಂಗ್ ಹೇಳಿದರು. ಪಕ್ಷದ ಹೆಸರಿನ ಮಹತ್ವವನ್ನು ಎತ್ತಿ ತೋರಿಸಿದ ಅವರು, ಬಿಹಾರದ ರಾಜಕೀಯ ಭೂದೃಶ್ಯಕ್ಕೆ ಹೊಸ ಆಶಾವಾದವನ್ನು ತರುವ ಪಕ್ಷದ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು.

ಆಪ್ ಸಬ್ ಕಿ ಆವಾಜ್ 140 ಸ್ಥಾಪಕ ಸದಸ್ಯರನ್ನು ಹೊಂದಿರುತ್ತದೆ ಮತ್ತು 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದೆ ಎಂದು ಸಿಂಗ್ ಹೇಳಿದರು.

ಪಕ್ಷದ ಧ್ವಜದ ಬಗ್ಗೆ ವಿವರಿಸಿದ ಸಿಂಗ್, "ಧ್ವಜವನ್ನು ಮೂರು ಸಮತಲ ಬ್ಯಾಂಡ್ ಗಳಾಗಿ ವಿಂಗಡಿಸಲಾಗಿದೆ - ಮೇಲ್ಭಾಗದಲ್ಲಿ ಹಸಿರು, ಮಧ್ಯದಲ್ಲಿ ಹಳದಿ ಮತ್ತು ಕೆಳಭಾಗದಲ್ಲಿ ಆಕಾಶ ನೀಲಿ ಇದೆ. ಹಳದಿ ಬ್ಯಾಂಡ್​ನ ಮಧ್ಯದಲ್ಲಿ ಕಪ್ಪು ವೃತ್ತವಿದೆ. ಇದರಲ್ಲಿ ಪಕ್ಷಕ್ಕೆ ಚುನಾವಣಾ ಆಯೋಗವು ನೀಡುವ ಪಕ್ಷದ ಚಿಹ್ನೆಯನ್ನು ಅಂತಿಮವಾಗಿ ಸೇರಿಸಲಾಗುತ್ತದೆ.

ರಾಷ್ಟ್ರೀಯ ಏಕತಾ ದಿನ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದೀಪಾವಳಿಯಂದು ಎಎಸ್ಎ ಪ್ರಾರಂಭಿಸುವ ಮಹತ್ವವನ್ನು ಸಿಂಗ್ ಒತ್ತಿ ಹೇಳಿದರು.

ಮೂಲತಃ ಅನುಭವಿ ಐಎಎಸ್ ಅಧಿಕಾರಿಯಾಗಿದ್ದ ಆರ್​ಸಿಪಿ ಸಿಂಗ್ 2010 ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರು ಶೀಘ್ರದಲ್ಲೇ ಜೆಡಿಯುನಲ್ಲಿ ಪ್ರಮುಖ ನಾಯಕರಾಗಿ ಬೆಳೆದರು. ಪಕ್ಷದಲ್ಲಿ ಇವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.


2021 ರಲ್ಲಿ ಮೋದಿ ಕ್ಯಾಬಿನೆಟ್​ನಲ್ಲಿ ಕೇಂದ್ರ ಉಕ್ಕು ಸಚಿವರಾದ ನಂತರ ಪಕ್ಷದೊಳಗೆ ಅವರ ರಾಜಕೀಯ ಸ್ಥಾನಮಾನವು ಬದಲಾಗಲು ಪ್ರಾರಂಭಿಸಿತು. ಅವರ ಅಧಿಕಾರಾವಧಿಯಲ್ಲಿ, ಸಿಂಗ್ ಅವರ ಕೆಲವು ನಿರ್ಧಾರಗಳು ನಿತೀಶ್ ಕುಮಾರ್ ಅವರ ನಿರೀಕ್ಷೆಗಳಿಗೆ ವಿರುದ್ಧವಾಗಿದ್ದವು ಎಂದು ವರದಿಯಾಗಿದೆ.

ಆ ಸಮಯದಲ್ಲಿ, ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿ ಸಿಂಗ್ ಅವರಿಗೆ ಬಿಜೆಪಿಯೊಂದಿಗೆ ಮಂತ್ರಿ ಸ್ಥಾನಗಳ ಮಾತುಕತೆ ನಡೆಸುವ ಕೆಲಸವನ್ನು ವಹಿಸಲಾಯಿತು. ಆದರೆ ಅವರ ನಿಲುವು ನಿತೀಶ್ ಕುಮಾರ್ ಅವರ ಆದ್ಯತೆಗಳೊಂದಿಗೆ ಹೊಂದಿಕೆಯಾಗಲಿಲ್ಲ. ಇದರ ಪರಿಣಾಮವಾಗಿ ಸಿಂಗ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲಾಲನ್ ಸಿಂಗ್ ಅವರ ಉತ್ತರಾಧಿಕಾರಿಯಾದರು.


ನಿತೀಶ್ ಕುಮಾರ್ ನಂತರ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಮುಂದುವರಿಸದಿರಲು ನಿರ್ಧರಿಸಿದರು. ಹೀಗಾಗಿ ಸಚಿವರಾಗಿ ಒಂದು ವರ್ಷದ ನಂತರ ಜುಲೈ 6, 2022 ರಂದು ಉಕ್ಕು ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು. ಇದರ ನಂತರ, ಸಿಂಗ್ ಬಿಜೆಪಿಗೆ ಸೇರಿದರಾದರೂ ಅಲ್ಲಿ ಅವರಿಗೆ ಹೇಳಿಕೊಳ್ಳುವಂಥ ಪ್ರಾಮುಖ್ಯತೆ ಸಿಗಲಿಲ್ಲ. ಈಗ, ತಿಂಗಳುಗಳ ಕಾಲ ಮೂಲೆಗುಂಪಾಗಿದ್ದ ಆರ್​ಸಿಪಿ ಸಿಂಗ್ ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದಾರೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget