ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್, ಹೃದಯಾಘಾತದಂತಹ ರೋಗಗಳು ಬಹಳ ಸಾಮಾನ್ಯವಾಗಿದೆ. ಆದರೆ ಇವೆಲ್ಲವುಗಳ ಹೊರತಾಗಿ ನಿಧಾನವಾಗಿ ನಮ್ಮ ಆರೋಗ್ಯ ಹಾಳು ಮಾಡಿ, ಸಾವಿಗೂ ಕಾರಣವಾಗುವ ಸಮಸ್ಯೆಗಳಿವೆ, ಅದರಲ್ಲಿ ವಾಯುಮಾಲಿನ್ಯವು ಒಂದು. ಇವುಗಳಿಂದ ಅನೇಕ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಜೊತೆಗೆ ವಾಯುಮಾಲಿನ್ಯ ಶ್ವಾಸಕೋಶವನ್ನು ಹಾನಿಗೊಳಿಸುವುದಲ್ಲದೆ ನಿಧಾನವಾಗಿ ದೇಹವನ್ನು ಹದಗೆಡಿಸುತ್ತದೆ. ಅದಕ್ಕಾಗಿಯೇ ಇದನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯಲಾಗುತ್ತದೆ. ವಾಯುಮಾಲಿನ್ಯದಿಂದಾಗಿ ಪ್ರತಿವರ್ಷ ಜನರು ಸಾಯುತ್ತಿದ್ದಾರೆ. ಅದರಲ್ಲಿಯೂ ಬೆಂಗಳೂರಿನಿಂದ ಆಘಾತಕಾರಿ ಅಂಕಿ ಅಂಶವೊಂದು ಹೊರಬಂದಿದ್ದು ಇಲ್ಲಿ ಮೂರನೇ ಒಂದು ಭಾಗದಷ್ಟು ಸಾವುಗಳು ವಾಯುಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಅಧ್ಯಯನ ಹೇಳಿದೆ. ಇಲ್ಲಿನ ನಗರಗಳಲ್ಲಿ ವಾಸಿಸುವ ಜನರ ಜೀವಿತಾವಧಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಅದಲ್ಲದೆ ವಿಷಕಾರಿ ಗಾಳಿಯಿಂದಾಗಿ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ವಾಯುಮಾಲಿನ್ಯ, ಜನರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವಾಸಿಸುವ ಹೆಚ್ಚಿನ ಜನ ತಮ್ಮ ದಿನವನ್ನು ಬೆಳಿಗ್ಗೆ ವಾಕಿಂಗ್ ಅಥವಾ ಜಿಮ್ ನೊಂದಿಗೆ ಪ್ರಾರಂಭಿಸುತ್ತಾರೆ ಜೊತೆಗೆ ಡಯಟ್ ಆಹಾರವನ್ನು ಸೇವನೆ ಮಾಡುತ್ತಾರೆ. ಆದರೆ ಇದೆಲ್ಲದರ ಹೊರತಾಗಿಯೂ, ಅವರು ದಿನನಿತ್ಯ ಮಾಲಿನ್ಯದಿಂದ ತುಂಬಿದ ಗಾಳಿಯನ್ನು ಉಸಿರಾಡುತ್ತಾರೆ, ಇದು ನಿಧಾನವಾಗಿ ಅವರ ಶ್ವಾಸಕೋಶವನ್ನು ಹಾಳುಮಾಡುತ್ತಿದೆ. ಇಲ್ಲಿನ 35 ಪ್ರತಿಶತಕ್ಕೂ ಹೆಚ್ಚು ಜನರು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ.
Post a Comment