ಸುಳ್ಯ ದಸರಾ ವಿಜೃಂಭಣೆಯಿಂದ ನಡೆಯಲಿ - ಡಾ.ಕೆ.ವಿ.ಚಿದಾನಂದ|ಎಸ್. ಅಂಗಾರ ಹಾಗೂ ಕೆ. ಗೋಕುಲ್ ದಾಸ್ ರವರಿಗೆ ಸನ್ಮಾನ
ಸುಳ್ಯ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024 ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ದೀಪ ಪ್ರಜ್ವಲಿಸಿ, ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಹಿಷಾಸುರನನ್ನು ಮರ್ಧನ ಮಾಡಿದ ಚಾಮುಂಡೇಶ್ವರಿ ದೇವಿಯ ಹಬ್ಬವನ್ನಾಗಿ ನವರಾತ್ರಿಯನ್ನು ಆಚರಿಸಲಾಗುತ್ತಿದ್ದು, ಸುಳ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾರದಾಂಬ ಉತ್ಸವವನ್ನು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸುಳ್ಯ ದಸರಾ ಉತ್ಸವವನ್ನಾಗಿ ನಡೆಸುತ್ತಿದ್ದು, ಇನ್ನಷ್ಟು ವಿಜೃಂಭಣೆಯಿಂದ ದಸರಾ ಉತ್ಸವವು ನಡೆಯಲಿ ಎಂದು ಶುಭಹಾರೈಸಿದರು.
ಶ್ರೀ ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಲೀಲಾಧರ್ ಡಿ. ವಿ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ ಸಮಾರಂಭ
ಶಾರದಾಂಬ ಉತ್ಸವವನ್ನು ತಾವು ಶಾಸಕರಾಗಿದ್ದ ವೇಳೆ ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಸಮಿತಿಯನ್ನು ರಚಿಸಿಕೊಂಡು ಅದರ ಪ್ರಥಮ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಎಸ್. ಅಂಗಾರ ಹಾಗೂ ಶ್ರೀ ಶಾರದಾಂಬ ಸಮಿತಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಪ್ರಸ್ತುತ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿರುವ ಕೆ. ಗೋಕುಲ್ ದಾಸ್ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ದಸರಾ ಕ್ರೀಡಾಕೂಟ ಬಹುಮಾನ ವಿತರಣೆ
ಈ ಸಂದರ್ಭದಲ್ಲಿ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ, ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾದವ ಗೌಡ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಕಾರ್ಯದರ್ಶಿ ಎಂ.ಕೆ. ಸತೀಶ್, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಶ್ರೀ ಶಾರದಾಂಬ ಉತ್ಸವ ಸಮಿತಿ ಕೋಶಾಧಿಕಾರಿ ಗಣೇಶ್ ಆಳ್ವ, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಗೌರವ ಸಲಹೆಗಾರರಾದ ಡಾ. ಯಶೋದಾ ರಾಮಚಂದ್ರ, ಶ್ರೀಮತಿ ಲತಾ ಮಧುಸೂದನ್, ಎಂ. ವೆಂಕಪ್ಪ ಗೌಡ ಉಪಸ್ಥಿತರಿದ್ದರು. ಶ್ರೀ ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಅವರು ಸ್ವಾಗತಿಸಿ, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಅವರು ವಂದಿಸಿದರು.
ಶಿವಪ್ರಸಾದ್ ಆಲೆಟ್ಟಿ ಮತ್ತು ಸುಶ್ಮಿತ ಕಡಪಳ ಕಾರ್ಯಕ್ರಮ ನಿರೂಪಿಸಿದರು.
Post a Comment