ಮೈತ್ರಿಕೂಟದಲ್ಲಿ ’ಮಹಾ ಗೊಂದಲ’ : ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ಬನ್ನಿ, ಇಲ್ಲಾಂದ್ರೆ ನಾವು ಚರ್ಚೆಗೇ ಬರೋಲ್ಲ: ಠಾಕ್ರೆ ಬಣ

 


ಮುಂಬಯಿ : ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ಇನ್ನು ಒಂದು ತಿಂಗಳೂ ಇಲ್ಲ, ಆದರೂ, ಮಹಾವಿಕಾಸ್ ಆಘಾಡಿಯ ಸೀಟು ಹಂಚಿಕೆ ಗೊಂದಲ ಮುಂದುವರಿಯುತ್ತಲೇ ಇದೆ. ರಾಜ್ಯದ 288 ಸ್ಥಾನಗಳ ಪೈಕಿ, ಕಾಂಗ್ರೆಸ್ - ಶಿವಸೇನೆ (ಠಾಕ್ರೆ ಬಣ) - ಎನ್ಸಿಪಿ (ಶರದ್ ಪವಾರ್ ಬಣ) ಎಷ್ಟೆಷ್ಟು ಸೀಟಿನಲ್ಲಿ ಸ್ಪರ್ಧಿಸಬೇಕು ಎನ್ನುವುದು ಕೊನೆಯ ಹಂತದ ಮಾತುಕತೆಯಲ್ಲಿದೆ. ಈ ನಡುವೆ, ಮುಂದಿನ ಸುತ್ತಿನ ಮಾತುಕತೆಗೆ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರನ್ನು ಹೊರಗಿಟ್ಟು ಬನ್ನಿ ಎಂದು ಶಿವಸೇನೆಯ ಸಂಜಯ್ ರಾವತ್ ಕಂಡೀಷನ್ ಹಾಕಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ, ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಮುಂಬೈಗೆ ಧಾವಿಸಿದ್ದಾರೆ. ಆದರೆ, ನಮ್ಮ ನಡುವೆ ಅಂತದ್ದೇನು ಇಲ್ಲ ಎಲ್ಲವೂ ಸರಿಯಿದೆ ಎಂದು ಪಟೋಲೆ ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು (ಅ 21) ಕಾಂಗ್ರೆಸ್ಸಿನ ಕೇಂದ್ರೀಯ ಇಲೆಕ್ಷನ್ ಕಮಿಟಿಯ ಸಭೆ ಮುಕ್ತಾಯಗೊಂಡಿದೆ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ನಾನಾ ಪಟೋಲೆ ಸಭೆಯಲ್ಲಿ ಹಾಜರಿದ್ದರು.

ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕೆಲವು ಸೀಟಿನ ಬಗ್ಗೆ ಇರುವ ಗೊಂದಲವನ್ನು ಸಭೆಯಲ್ಲಿ ವಿವರಿಸಿದ್ದಾರೆ. ಪ್ರಮುಖವಾಗಿ, ವಿದರ್ಭ ಭಾಗದ ಕೆಲವು ಕ್ಷೇತ್ರದಲ್ಲಿ ಎಂವಿಎ ಮೈತ್ರಿಕೂಟದ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ಶರದ್ ಪವಾರ್ ಮತ್ತು ಉದ್ದವ್ ಠಾಕ್ರೆ ಜೊತೆ ಮಾತುಕತೆ ನಡೆಸಿ, ಏನೂ ಗೊಂದಲವಿಲ್ಲದೇ ಚುನಾವಣಾ ಎದುರಿಸುವ ವಿಶ್ವಾಸವನ್ನು ಪಟೋಲೆ ವ್ಯಕ್ತ ಪಡಿಸಿದ್ದಾರೆ.


"ರಾಜ್ಯದ 288 ಸ್ಥಾನಗಳ ಪೈಕಿ 96 ಸೀಟಿನ ಅಭ್ಯರ್ಥಿ ಆಯ್ಕೆಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಪವಾರ್ ಮತ್ತು ಠಾಕ್ರೆಯವರ ಜೊತೆಗೆ ನಾಳೆ ಮಾತುಕತೆ ನಡೆಸಲಿದ್ದೇವೆ. 30 : 40 ಅನುಪಾತದಲ್ಲಿ ಸೀಟ್ ಹಂಚಿಕೆಯ ಬಗ್ಗೆ ವಿವರಣೆಯನ್ನು ನೀಡಲಿದ್ದೇವೆ. ನಮ್ಮ ಮೈತ್ರಿಕೂಟದಲ್ಲಿ ಯಾವುದೇ ಗೊಂದಲವಿಲ್ಲ" ಎಂದು ನಾನಾ ಪಟೋಲೆ, ಸಭೆಯ ನಂತರ ಸ್ಪಷ್ಟನೆಯನ್ನು ನೀಡಿದ್ದಾರೆ.

ನಾವು ನಾಳೆ ಸಂಜೆಯ ಹೊತ್ತಿಗೆ ಯಾವ ಪಕ್ಷ ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಲಿದೆ ಎನ್ನುವುದನ್ನು ಅಂತಿಮಗೊಳಿಸಲಿದ್ದೇವೆ. 17 ಕ್ಷೇತ್ರಗಳಲ್ಲಿ, ಅದರಲ್ಲಿ ಪ್ರಮುಖವಾಗಿ ವಿದರ್ಭ ಭಾಗದ 7-8 ಸೀಟುಗಳ ವಿಚಾರದಲ್ಲಿ ಗೊಂದಲವಿರುವುದು ಹೌದು. ಮೂರು ಪಕ್ಷಗಳು 288 ಸ್ಥಾನದಲ್ಲಿ ಜೊತೆಯಾಗಿ ಸ್ಪರ್ಧಿಸುತ್ತಿರುವುದರಿಂದ ಕೆಲವೊಂದು ಸಮಸ್ಯೆಗಳು ಸ್ವಾಭಾವಿಕ ಎಂದು ವಿಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ. ಸೀಟ್ ಹಂಚಿಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ನಡೆದ ಸಭೆಯಲ್ಲಿ ಸಂಜಯ್ ರಾವತ್ ಮತ್ತು ನಾನಾ ಪಟೋಲೆ ನಡುವೆ ತೀವ್ರ ವಾಗ್ಯುದ್ದ ಏರ್ಪಟ್ಟಿತ್ತು. ಮುಂದಿನ ಸುತ್ತಿನ ಮಾತುಕತೆಯಲ್ಲಿ ಪಟೋಲೆ ಇರಕೂಡದು, ಇದ್ದರೆ ಸಭೆಗೆ ಹಾಜರಾಗುವುದಿಲ್ಲ ಎಂದು ಸಂಜಯ್ ರಾವತ್, ಸಭೆಯಿಂದ ಹೊರ ನಡೆದರು ಎಂದು ಹೇಳಲಾಗುತ್ತಿದೆ. 

" ನಮಗೆ ಹೆಚ್ಚಿನ ಸಮಯಾವಕಾಶವಿಲ್ಲ, ಕಾಲಹರಣ ಮಾಡಿಕೊಂಡು ಸಮಯ ವ್ಯರ್ಥ ಮಾಡಿಕೊಂಡು ಕೂತರೆ ನಮಗೇ ತೊಂದರೆ. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ. ಮುಂದಿನ ಸಭೆಯಲ್ಲಿ ಪಟೋಲೆ ಅವರನ್ನು ಹೊರಗಿಟ್ಟು ಬಂದರೆ, ಮಾತುಕತೆ ಮುಂದಕ್ಕೆ ಹೋಗುತ್ತದೆ " ಎಂದು ಸಂಜಯ್ ರಾವತ್ ಹೇಳಿದ್ದಾರೆ.



ನಾವು ಬಹುತೇಕ ಕ್ಷೇತ್ರ ಹಂಚಿಕೆಯ ಸಂಬಂಧ ಸಹಮತಕ್ಕೆ ಬಂದಿದ್ದೇವೆ. ಬಿಜೆಪಿ ಮೈತ್ರಿಕೂಟವು ವಿನಾಕಾರಣ ಸುಳ್ಳು ಸುದ್ದಿಯನ್ನು ಹರಡುತ್ತಿದೆ. ಮಹಾರಾಷ್ಟ್ರವನ್ನು ಲೂಟಿ ಹೊಡೆದ ಪಕ್ಷದ ನಿರ್ನಾಮವನ್ನು ಮುಂದಿನ ಚುನಾವಣೆಯಲ್ಲಿ ಮಾಡುತ್ತೇವೆ ಎನ್ನುವ ಖಚಿತ ವಿಶ್ವಾಸದ ಮಾತನ್ನು ರಾವತ್ ಆಡಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget