ಬೆಂಗಳೂರು: ಯಾವುದೇ ರೈತರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಹಾಗೂ ಅವರಿಗೆ ನೀಡಲಾದ ನೋಟಿಸ್ ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ರೈತರಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ಬಗ್ಗೆ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ “ಯಾವುದೇ ರೈತರನ್ನೂ ಅವರ ಜಮೀನಿನಿಂದ ಹೊರ ಹಾಕುವುದಿಲ್ಲ. ಈ ಬಗ್ಗೆ ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ ಎಂದರು.
ಯಾದಗಿರಿ, ಧಾರವಾಡ ಜಿಲ್ಲೆಯ ರೈತರಿಗೂ ಇದೇ ರೀತಿ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಒಂದು ವೇಳೆ ರೈತರಿಗೆ ನೋಟಿಸ್ ಜಾರಿ ಮಾಡಿದ್ದರೆ ವಾಪಸ್ ಪಡೆಯಲಾಗುವುದು, ‘ಕಂದಾಯ ಸಚಿವರಿಗೆ ಈ ಬಗ್ಗೆ ಪರಿಶೀಲಿಸುವಂತೆ ಹೇಳುತ್ತೇನೆ. ಯಾವುದೇ ರೈತರನ್ನು ಬೀದಿಪಾಲು ಮಾಡುವುದಿಲ್ಲ ಎಂದರು.
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುವುದು. ಅದರಲ್ಲಿ, ಸಹಾಯಕ ಆಯುಕ್ತರು, ಎಲ್ಲ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ವಕ್ಫ್ ಅಧಿಕಾರಿಗಳು ಇರುತ್ತಾರೆ. 1973- 74ರಲ್ಲಿ ಅಧಿಸೂಚನೆಯಾಗುವ ಪೂರ್ವದಲ್ಲಿನ ದಾಖಲೆಗಳನ್ನು ರೈತರು ಸಲ್ಲಿಸಿದರೆ, ಅಂತಹ ಅಧಿಸೂಚಿತ ಜಾಗಗಳ ಕೈ ಬಿಡಲು ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಯತ್ನಾಳ್-ವಿಜಯೇಂದ್ರ ನಡುವೆ ರಾಜಕೀಯ ಸಂಘರ್ಷ:
ಹೊನವಾಡದಲ್ಲಿ ವಕ್ಫ್ ಭೂಮಿ ಇರುವುದು 11 ಎಕರೆ ಮಾತ್ರ. ಈ ಬಗ್ಗೆ ವ್ಯವಸ್ಥಿತವಾಗಿ ಗೊಂದಲ ಮೂಡಿಸಿ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿಸಿ, ಜನರ ನಡುವೆ ಸಂಘರ್ಷ ಉಂಟು ಮಾಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಇದು ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ರಾಜಕೀಯ ಸಂಘರ್ಷದ ಪ್ರತಿಬಿಂಬ ಎಂದು ಪ್ರತಿಪಕ್ಷದ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನನ್ನು ವಕ್ಫ್‌ಗೆ ಸೇರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 1974ರಲ್ಲಿ ಮಹಲ್ ಬಗಾಯತ್ ಎಂಬ ಗ್ರಾಮದ ದಾಖಲೆಗಳಲ್ಲಿ ಬ್ರ್ಯಾಕೆಟ್‍ನಲ್ಲಿ ಹೊನವಾಡ ಎಂದು ಸೇರಿಸಲಾಗಿತ್ತು. ಅದನ್ನು 1977ರಲ್ಲಿ ವಕ್ಫ್ ಬೋರ್ಡ್‍ನವರೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೊನವಾಡ ಎಂಬುದನ್ನು ತೆಗೆಸಿದ್ದಾರೆ. ಈ ಸಂಬಂಧ ಸರಕಾರ ಅಧಿಸೂಚನೆಯೂ ಹೊರಡಿಸಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
Post a Comment