ಬೆಂಗಳೂರು: 2023ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ (Congress Party) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ (Shakti Scheme) ಕೂಡ ಒಂದಾಗಿದ್ದು, ರಾಜ್ಯಾದ್ಯಂತ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ. ಯೋಜನೆ ಜಾರಿಯಾಗಿ ಒಂದು ವರ್ಷಕ್ಕೂ ಅಧಿಕ ಕಾಲಗಳಾಗಿದ್ದು, ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ಮಹಿಳೆಯರಿಗಾಗಿ ಜಾರಿಗೆ ತಂದಿದ್ದ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಎಂಬ ಅನುಮಾನ ಮೂಡಲು ಶುರುವಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ನೀಡಿರುವ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತಿದೆ.
ವಿಧಾನಸೌಧ ಮುಂಭಾಗ ನೂತನ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಶಕ್ತಿ ಯೋಜನೆ ಮುಂದುವರೆಸುವ ವಿಚಾರವಾಗಿ ಮರುಪರಿಶೀಲನೆ ನಡೆಸುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಯು ಖಾಸಗಿ ಸಂಸ್ಥೆಗಳನ್ನೂ ಮೀರಿಸಬಲ್ಲ ಗುಣಮಟ್ಟದ ಸೇವೆಗಳನ್ನು ನೀಡುತ್ತಿದೆ. ನಾವು ಶಕ್ತಿ ಯೋಜನೆಯ ಮೂಲಕ ಹೆಣ್ಣುಮಕ್ಕಳು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿದೆವು. ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುವ ಕೆಲವು ಮಹಿಳೆಯರು ನನ್ನನ್ನು ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದು, ತಾವು ಹಣ ಕೊಟ್ಟು ಪ್ರಯಾಣ ಮಾಡಲು ಬಯಸಿದರೂ ಕಂಡಕ್ಟರ್‌ಗಳು ಸ್ವೀಕರಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸದ್ಯದಲ್ಲೇ ಈ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇವೆ. ಇದರ ಬಗ್ಗೆ ಶೀಘ್ರದಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಸಭೆ ಮಾಡತ್ತೇವೆ. ಪ್ರತ್ಯೇಕವಾಗಿ ಸಭೆ ನಡೆಸಿ ಶಕ್ತಿ ಯೋಜನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಜೂನ್ 11, 2023ರಂದು ಶಕ್ತಿ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ಅದರಂತೆ ಮಹಿಳೆಯರು ತಮ್ಮ ಬಳಿ ಇರುವ ಕೇಂದ್ರ ಅಥವಾ ರಾಜ್ಯ ಸರ್ಕಾರವು ನೀಡಿದ ಮಾನ್ಯ ಗುರುತಿನ ಚೀಟಿಯನ್ನು ತೋರಿಸಿ ರಾಜ್ಯಾದ್ಯಂತ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಅನೇಕ ಬಾರಿ ಹೊಡೆದಾಟಗಳು ಸಂಭವಿಸಿದೆ. ಇದಲ್ಲದೆ ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಹಲವರು ಯೋಜನೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
Post a Comment