ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ


 ಮುಂಬೈ: ದೇಶದ ಕೈಗಾರಿಕಾಉದ್ಯಮಕ್ಕೆ ಅಭಿವೃದ್ಧಿಯ ದಿಕ್ಕೂಚಿಯನ್ನು ನೀಡಿದ್ದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ ಇಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಟಾಟಾ ಸಮೂಹ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯ ಸ್ಥಿತಿ ಕುರಿತಂತೆ ಎರಡು ದಿನದ ಹಿಂದಷ್ಟೇ ವದಂತಿ ಹಬ್ಬಿದಾಗ 'ನಾನು ಆರೋಗ್ಯವಾಗಿದ್ದೇನೆ' ಎಂದು ಸ್ವತಃ ಸ್ಪಷ್ಟನೆ ನೀಡಿದ್ದರು.


ಬುಧವಾರ ಬೆಳಿಗ್ಗೆ ಅವರ ಆರೋಗ್ಯಸ್ಥಿತಿಯಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಬೀಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 11.30 ಗಂಟೆಗೆ ಅವರು ಮೃತಪಟ್ಟರು. ಇದರೊಂದಿಗೆ ದೇಶದ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದ ರತನ್ ಟಾಟಾ ಎಂಬ ಚೇತನ ನಂದಿಹೋಯಿತು.


'ರತನ್ ಟಾಟಾ ಅವರು ಇನ್ನಿಲ್ಲ' ಎಂದು ಟಾಟಾ ಸನ್ಸ್‌ ಸಂಸ್ಥೆಯ ಅಧ್ಯಕ್ಷ ಎನ್‌.ಚಂದ್ರಶೇಖರನ್ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದು, 'ರತನ್ ಟಾಟಾ ಅವರು ನನಗೆ ಸ್ನೇಹಿತ, ಗುರು ಮತ್ತು ಮಾರ್ಗದರ್ಶಿ' ಎಂದೂ ಸ್ಮರಿಸಿದ್ದಾರೆ.


'ರತನ್ ನೇವಲ್ ಟಾಟಾ ಅವರು ನಿಧನರಾಗಿದ್ದಾರೆ. ಅವರು ನೀಡಿದ ಅಪಾರ ಕೊಡುಗೆಗಳು ಟಾಟಾ ಸಮೂಹವನ್ನಷ್ಟೇ ಅಲ್ಲದೆ ರಾಷ್ಟ್ರವನ್ನು ರೂಪಿಸಿವೆ' ಎಂದ ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್ ಹೇಳಿದ್ದಾರೆ. ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಉದ್ಯಮಿ ಹರೀಶ್ ಗೋಯೆಂಕಾ, ರತನ್ ಟಾಟಾ ಅವರನ್ನು ದಿಗ್ಗಜ ಎಂದು ಬಣ್ಣಿಸಿದ್ದಾರೆ.


ಎರಡು ದಿನದ ಹಿಂದೆಯಷ್ಟೇ ಅನಾರೋಗ್ಯ ಕುರಿತ ವದಂತಿಗಳ ನಡುವೆ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಲು ಟಾಟಾ ಅವರು ಸಹಿ ಮಾಡಿದ ಹೇಳಿಕೆಯನ್ನು 'ಎಕ್ಸ್' ಮತ್ತು 'ಇನ್‌ಸ್ಟಾಗ್ರಾಮ್' ನಲ್ಲಿ ಬಿಡುಗಡೆ ಮಾಡಲಾಗಿತ್ತು. ರತನ್ ಟಾಟಾ ಅವರ ಅಗಲಿಗೆ ಹಲವು ಪ್ರಮುಖರು ಸಂತಾಪ ನುಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಹಲವು ಉದ್ಯಮ ಕ್ಷೇತ್ರದ ಹಲವು ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

ಟಾಟಾ ಸಮೂಹದ ಪ್ರೇರಕ ಶಕ್ತಿ


ಸುಮಾರು 20 ವರ್ಷ ಕಾಲ ಟಾಟಾ ಸನ್ಸ್‌ ಸಂಸ್ಥೆಯನ್ನು ಮುನ್ನಡೆಸಿದ್ದರು. ಅಲ್ಲದೆ, ದೇಶದ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ಕಂಪನಿಯ ಬಾಹುವನಿನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಸಂಖ್ಯ ಸಿಬ್ಬಂದಿಗೆ ಪ್ರೇರಕಶಕ್ತಿಯಾಗಿದ್ದರು. ದೇಶಿ ಉತ್ಪಾದನೆಗೆ ಮೆರಗು, ಖ್ಯಾತಿಯನ್ನು ನೀಡಿದ್ದರು.


ದೊಡ್ಡ ಸಂಸ್ಥೆಯ ಸ್ಥಾಪಕರಾಗಿ ನಮ್ರತೆ, ಸರಳತೆಯಿಂದಾಗಿಯೂ ಅವರು ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಟಾಟಾ ಸಂಸ್ಥೆ ಇಂದು ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿ ಖ್ಯಾತಿ ಪಡೆದಿದೆ. 2023-24ನೇ ಹಣಕಾಸು ವರ್ಷದಲ್ಲಿ ಸಮೂಹ ಸಂಸ್ಥೆಗಳ ಒಟ್ಟು ವರಮಾನ 165 ಬಿಲಿಯನ್ ಡಾಲರ್‌ಗಳು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget