ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟವನ್ನು ಅ. 30 ರಂದು ಹಮ್ಮಿಕೊಳ್ಳಲಾಯಿತು.
ಪುರುಷರ ವಿಭಾಗದ ಗುಡ್ಡಗಾಡು ಓಟವನ್ನು ದಕ್ಷಿಣ ವಲಯ ಖೋ ಖೋ ಕ್ರೀಡಾಪಟು ಮತ್ತು ಕೆ ಎಸ್ ಎಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ರೈಲ್ವೆ ಉದ್ಯೋಗಿಯಾಗಿರುವ ಬಾಲಭಾಸ್ಕರ ಅವರು ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು.
ಮಹಿಳೆಯರ ವಿಭಾಗವನ್ನು ರಾಷ್ಟ್ರೀಯ ಕ್ರೀಡಾಪಟು ಮತ್ತು ಕೆ.ಎಸ್.ಎಸ್ ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಪ್ರಸ್ತುತ ಪುತ್ತೂರಿನ ಕೊಂಬೆಟ್ಟು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಗೀತಾಂಜಲಿ ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು. ಸ್ಪರ್ಧೆಯು ಏನೆಕಲ್ಲಿನ ಬಾಲಾಡಿಯಿಂದ ಆರಂಭವಾಗಿ ಕಾಲೇಜಿನ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ವಹಿಸಿದರು. ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ ರಾಧಾಕೃಷ್ಣ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಸನ್ನ ಕೆ .ಬಿ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ್ ಏನೆಕಲ್ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸಾಯಿ ಗೀತ ಕೂಜುಗೋಡು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ,ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶದ ಸಂಯೋಜಕಿ ಲತಾ ಬಿ ಟಿ ಉಪಸ್ಥಿತರಿದ್ದರು. ಬೆಳ್ಳಾರೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ವಾಚಿಸಿದರು.
ಪುರುಷರ ವಿಭಾಗದಲ್ಲಿ ಪ್ರಥಮ ಆಳ್ವಾಸ್ ಕಾಲೇಜು ಮೂಡಬಿದ್ರೆ, ದ್ವಿತೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ತೃತೀಯ ಕೆ ಎಸ್ ಎಸ್ ಕಾಲೇಜ್ ಸುಬ್ರಹ್ಮಣ್ಯ, ಚತುರ್ಥ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಉಪ್ಪಿನಂಗಡಿ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಆಳ್ವಾಸ್ ಕಾಲೇಜು ಮೂಡಬಿದ್ರೆ, ದ್ವಿತೀಯ ಕೆ ಎಸ್ ಎಸ್ ಕಾಲೇಜ್ ಸುಬ್ರಹ್ಮಣ್ಯ, ತೃತೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಚತುರ್ಥ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಅಜ್ಜರಕಾಡು ಪಡೆದುಕೊಂಡಿತು. ರಚನಾ ಪ್ರಾರ್ಥಿಸಿದರು, ಕನ್ನಡ ಉಪನ್ಯಾಸಕಿ ಸುಮಿತ್ರ ನಿರೂಪಿಸಿದರು.ವಾಣಿಜ್ಯಶಾಸ್ತ್ರ ಉಪನ್ಯಾಸಕ ಡಾ. ವಿನ್ಯಾಸ್ ಹೊಸೋಳಿಕೆ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪುಷ್ಪ ವಂದಿಸಿದರು.
Post a Comment