ಶ್ರೀನಗರ: ಕಾಶ್ಮೀರ ವಿಚಾರ ಸಂಬಂಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ದ ಎಂದು ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಸರೆನ್ಸ್ ಅಧ್ಯಕ್ಷ ಮಿರ್‌ವಾಯಿಝ್ ಉಮರ್ ಫಾರೂಕ್ ಹೇಳಿದ್ದಾರೆ.
ಈ ಹಿಂದೆಯೂ ಮಾತುಕತೆ ಮೂಲಕ ಕಾಶ್ಮೀರ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಸಿದ್ದ ಎಂದು ಹುರಿಯತ್ ಸ್ಪಷ್ಟಪಡಿಸಿತ್ತು. 30 ವರ್ಷಗಳ ನಂತರವೂ ನಮ್ಮದು ಅದೇ ದೃಷ್ಟಿಕೋನ' ಮಿರ್‌ವಾಯಿಝ್ ಹೇಳಿದ್ದಾರೆ.
ಶ್ರೀನಗರದ ನೌಹಟ್ಟಾ ಪ್ರದೇಶದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬ್ರಿಕ್ಸ್ ಶೃಂಗಸಭೆಯಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಕತೆ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಯುದ್ಧದ ಬಗ್ಗೆಯಲ್ಲ ಎಂದು ಮಿರ್‌ವಾಯಿಜ್ ಹೇಳಿದ್ದಾರೆ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಭಾರತದೊಂದಿಗೆ ಮಾತುಕತೆ ನಡೆಸಲು ನಾವು ಯಾವತ್ತೂ ಸಿದ್ಧ' ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಾಂದರ್‌ಬಾಲ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು. ಗಂದರ್‌ಬಾಲ್‌ನ ಗಗಾಂಗಿರ್ ಪ್ರದೇಶದ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ ಸ್ಥಳೀಯ ವೈದ್ಯ ಮತ್ತು ಆರು ಮಂದಿ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದರು. ಗುರುವಾರ ಉತ್ತರ ಕಾಶ್ಮೀರದ ಬಾರಾಮುಲ್ಲಾದ ಗುಲ್ಮಾರ್ಗ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಯೋಧರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
'ಗಗಾಂಗಿರ್‌ನಲ್ಲಿನ ಇತ್ತೀಚಿನ ಹತ್ಯೆಗಳು ಆಘಾತಕಾರಿ ಮತ್ತು ಆತಂಕಕಾರಿಯಾಗಿದೆ. ಈಗ, ನಾವು ಗುಲ್ಮಾರ್ಗ್ ಭಾರಿ ಭದ್ರತೆ ಇರುವ ಪ್ರದೇಶಗಳಲ್ಲಿ ಹತ್ಯೆಗಳ ಬಗ್ಗೆ ಕೇಳುತ್ತೇವೆ. ಇವುಗಳು ಉಲ್ಬಣಗೊಳ್ಳಬಹುದಾದ ಅತ್ಯಂತ ಗಂಭೀರವಾದ ವಿಷಯಗಳು. ಇವುಗಳ ಬಗ್ಗೆ ತನಿಖೆಯಾಗಬೇಕು ಎಂದು ಮಿರ್‌ವಾಯಿಝ್ ಆಗ್ರಹಿಸಿದ್ದಾರೆ.
Post a Comment