ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ಗೆ ಅನಿವಾರ್ಯ ಎನ್ನುವುದಕ್ಕಿಂತ ಇವತ್ತಿನ ಪರಿಸ್ಥಿತಿಗೆ ಅವಶ್ಯಕ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಬೆಂಗಳೂರು: "ಪಕ್ಷಕ್ಕೆ ಬದ್ಧರಾಗಿರುತ್ತೇವೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕಷ್ಟ. ಕಾನೂನಿನಲ್ಲಿ ಬ್ಯಾನ್ ಮಾಡಿದರೆ ಮಾತ್ರ ಪಕ್ಷಾಂತರ ನಿಲ್ಲುತ್ತದೆ" ಎಂದು ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರದ ಬಳಿ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, "ರಾಜಕಾರಣದಲ್ಲಿ ನೋ ಪರ್ಮನೆಂಟ್ ಎನಿಮಿ. ನೋ ಪರ್ಮನೆಂಟ್ ಫ್ರೆಂಡ್. ಇತ್ತೀಚೆಗೆ ಹರಿಯಾಣ, ಮಹಾರಾಷ್ಟ್ರದಲ್ಲೂ ಇಂತಹ ಬೆಳವಣಿಗೆ ನೋಡಿದ್ದೇವೆ. ಪಕ್ಷ ನಿಷ್ಟರು ಕೆಲವರಿದ್ದಾರೆ. ಕಾನೂನಿನಲ್ಲಿ ಪಕ್ಷಂತಾರಕ್ಕೆ ಅವಕಾಶವಿದೆ" ಎಂದರು.
ಯೋಗೇಶ್ವರ್ ಜನಪರ ಕೆಲಸ ಮಾಡಿದ್ದಾರೆ; ಪರಮೇಶ್ವರ್: "ಯೋಗೇಶ್ವರ್ ಅವರನ್ನು ಕಾಂಗ್ರೆಸ್ಸಿಗೆ ಸ್ವಾಗತ ಮಾಡುತ್ತೇನೆ. ಹೈಕಮಾಂಡ್ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಇದು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿಯನ್ನು ಕೊಡುತ್ತದೆ. ಯೋಗೇಶ್ವರ್ ಕ್ಷೇತ್ರದಲ್ಲಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಜನಪರವಾಗಿ ಅವರಿಗೆ ಒಳ್ಳೆಯ ಅಭಿಪ್ರಾಯವಿದೆ. ನಮ್ಮ ಪಕ್ಷಕ್ಕೆ ಅವರು ಬಂದಿರುವುದು ಒಳ್ಳೆಯದು. ಆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ" ಎಂದರು.
ಯೋಗೇಶ್ವರ್ ಕಾಂಗ್ರೆಸ್ಸಿಗೆ ಅನಿವಾರ್ಯತೆನಾ ಎಂಬ ವಿಚಾರವಾಗಿ ಮಾತನಾಡಿದ ಗೃಹಸಚಿವರು, "ಆ ರೀತಿ ಪ್ರಶ್ನೆ ಬರಲ್ಲ, ನಾವು ಕ್ಷೇತ್ರವನ್ನು ಗೆಲ್ಲಬೇಕು. ರಣನೀತಿ ಮಾಡಬೇಕು. ಯಾವ ರೀತಿ ರಣನೀತಿ ಮಾಡಬೇಕೋ, ಅದನ್ನು ನಮ್ಮ ಅಧ್ಯಕ್ಷರು ಮಾಡಿದ್ದಾರೆ. ಡಿಕೆಶಿ ಸಹೋದರ ಸುರೇಶ್ ಅವರ ಲೋಕಸಭಾ ವ್ಯಾಪ್ತಿಗೆ ಬರುತ್ತೆ. ಪಕ್ಷದ ಹಿತದೃಷ್ಟಿಯಿಂದ ಕರೆದುಕೊಂಡಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತನು ಡಿಕೆಶಿ ಅವರಿಗೆ ಪರಿಚಯ ಇರೋದ್ರಿಂದ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದಾರೆ. ಅನಿವಾರ್ಯತೆ ಅನ್ನುವುದಕ್ಕಿಂತ ಇವತ್ತಿನ ಪರಿಸ್ಥಿತಿಗೆ ಅವಶ್ಯಕ" ಎಂದು ತಿಳಿಸಿದರು.
ಅಂತಿಮವಾಗಿ ಗೆಲುವೊಂದೇ ಮಾನದಂಡ: ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಗೊಂದಲ ಕುರಿತು ಪ್ರತಿಕ್ರಿಯಿಸಿ, "ಎಲ್ಲಾ ಮಾಹಿತಿಯನ್ನು ಕಾಂಗ್ರೆಸ್ ಕಲೆ ಹಾಕಿದೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎನ್ನುವುದೇ ಮಾನದಂಡ. ಕಾರ್ಯಕರ್ತರಿಂದ ಬರುವ ಮಾಹಿತಿ ಆಧಾರದ ಮೇಲೆ ತೀರ್ಮಾನ ಆಗುತ್ತದೆ" ಎಂದರು.
ನಾಗೇಂದ್ರ ಜಾಮೀನು ರದ್ದು ಕೋರಿ ಇಡಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, "ಕೋರ್ಟ್ ಏನು ತೀರ್ಮಾನ ಮಾಡುತ್ತೋ ಕಾದು ನೋಡೋಣ. ಕೋರ್ಟ್ ತೀರ್ಮಾನದ ಮೇಲೆ ಎಲ್ಲವೂ ಮುಂದುವರಿಯುತ್ತೆ. ಕೋರ್ಟ್ ಜಾಮೀನು ರದ್ದು ಮಾಡಿದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಕೋರ್ಟ್ ಅರ್ಜಿ ರದ್ದು ಮಾಡಿದರೆ, ಅವರು ಸೇಫ್ ಆಗುತ್ತಾರೆ. ತನಿಖೆ ಅದರ ಪಾಡಿಗೆ ಆಗುತ್ತದೆ" ಎಂದರು.
ಹೆಚ್ಚಿನ ಮಳೆ ಹಿನ್ನೆಲೆ ತೊಂದರೆ: ಬೆಂಗಳೂರಲ್ಲಿ ಮಳೆಹಾನಿ ವಿಚಾರವಾಗಿ ಪ್ರತಿಕ್ರಿಯಿಸಿ, "ಇನ್ನೂ ಶನಿವಾರದವರೆಗೆ ಮಳೆ ಇದೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಹಾಗೂ ಬಿಬಿಎಂಪಿ ಅವರು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಮಳೆ ಬರುತ್ತಿರುವುದರಿಂದ ಜನರಿಗೆ ತೊಂದರೆ ಆಗಿದೆ. ಮೂಲಸೌಕರ್ಯಗಳಿಗೂ ತೊಂದರೆ ಆಗಿದೆ. ನಿರ್ಮಾಣ ಹಂತದ ಕಟ್ಟಡ ಕುಸಿದು, ಎಂಟು ಜನ ಸಾವನ್ನಪ್ಪಿದ್ದಾರೆ. ಒಳಗೆ ಎಷ್ಟು ಜನ ಸಿಕ್ಕಿ ಹಾಕಿಕೊಂಡಿದ್ದಾರೆ ಗೊತ್ತಿಲ್ಲ. ಇಡೀ ಬೆಂಗಳೂರಿನಲ್ಲಿ ಒಂದು ರೀತಿಯ ಗಂಭೀರ ವಾತಾವರಣ ಇದೆ" ಎಂದರು.
Post a Comment