ಇಡಿ ದಾಳಿಯಿಂದ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ನಿಜ ಬಣ್ಣ ಬಯಲು: ಸಂಸದ ಕ್ಯಾ. ಬ್ರಿಜೇಶ್ ಚೌಟ


ಮಂಗಳೂರು: ಮೈಸೂರಿನ ಮುಡಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ನಡೆಸಿರುವ ದಾಳಿಯಿಂದ ಕಾಂಗ್ರೆಸ್ ನೇತೃತ್ವದ ರಾಜ್ಯದ ಭ್ರಷ್ಟ ಸರ್ಕಾರದ ನಿಜ ಬಣ್ಣ ಬಯಲಾಗಿದ್ದು, ಈ ಲೂಟಿಕೋರ ಸಿದ್ದರಾಮಯ್ಯನವರ ಸರಕಾರವನ್ನು ಕಟಕಟೆಗೆ ತಂದು ನಿಲ್ಲಿಸುವ ಕಾಲ ಹತ್ತಿರವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. 


ಮುಡಾ ಭೂಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಹಲವೆಡೆ ಇಡಿ ನಡೆಸಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ಈ ಮುಡಾ ನಿವೇಶನ ಹಂಚಿಕೆ ಭೂಹಗರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆಯು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಆ ಮೂಲಕ ತನ್ನ ಉತ್ತರದಾಯಿತ್ವವನ್ನು ಮರೆಮಾಚಿ ರಾಜ್ಯದ ಜನತೆಯನ್ನು ಹೇಗೆ ದಾರಿ ತಪ್ಪಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಈ ಪ್ರಕರಣದಲ್ಲಿ ಇ.ಡಿ. ಎಂಟ್ರಿಯಾಗಿರುವ ಕಾರಣ ಸತ್ಯಾಂಶ ಶೀಘ್ರ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ, ಎಫ್ಐಆರ್ ದಾಖಲಾದ ಬಳಿಕ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಬೇಕಾಗಿದ್ದ ಸಿಎಂ ಸಿದ್ದರಾಮಯ್ಯನವರು ಕುರ್ಚಿ ಉಳಿಸಿಕೊಳ್ಳಲು ಇಷ್ಟು ದಿನ ತಮ್ಮ ವಿರುದ್ಧದ ಎಲ್ಲ ಗಂಭೀರ ಆರೋಪಗಳಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ತಪ್ಪೇ ಮಾಡಿಲ್ಲ ಎನ್ನುತ್ತಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುತ್ತಲೇ ಬಂದು ಕೊನೆಗೆ ಕಳ್ಳನ ಮನಸ್ಸು ಹುಳ್ಳುಹುಳ್ಳಗೆ ಎಂಬಂತೆ ನಿವೇಶನ ವಾಪಾಸ್ ಮಾಡಿರುವುದು ಯಾಕೆ? ಸಿಎಂಗೆ ತಾವು ತಪ್ಪೇ ಮಾಡಿಲ್ಲ ಎಂದು ಹೇಳುವ ಧೈರ್ಯವಿದ್ದರೆ, ತನಿಖೆ ಎದುರಿಸಲು ಭಯವೇಕೇ? ಅಪವಾದ ಮುಕ್ತವಾಗಿ ಹೊರಬರಲು ಅವರಿಗೆ ಅಡ್ಡಿಯಾಗಿರುವುದು ಯಾವುದು? ಎಂದು ಸಂಸದರು ಪ್ರಶ್ನಿಸಿದ್ದಾರೆ. 


ಕಾಂಗ್ರೆಸ್‌ ಪ್ರತಿ ಸಲ ಯಾವುದೇ ತನಿಖೆ ಅಥವಾ ದಾಳಿ ನಡೆದಾಗ ಅದನ್ನು ರಾಜಕೀಯ ಪ್ರೇರಿತ ಎಂಬುದಾಗಿ ಹೇಳಿ ಸತ್ಯ ಮರೆಮಾಚುವುದು ಒಂದು ಚಾಳಿಯಾಗಿದೆ. ಎಲ್ಲ ಹಗರಣಗಳಲ್ಲಿಯೂ ಕಾಂಗ್ರೆಸ್‌ ಪಕ್ಷವು ಇದೇ ರೀತಿಯ ತಂತ್ರಗಾರಿಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ತಮ್ಮ ರಾಜಕೀಯ ವಿರೋಧಿಗಳ ವಿಚಾರಕ್ಕೆ ಬಂದರೆ ನಮ್ಮ ಪಕ್ಷದ ಮುಗ್ಧ ಕಾರ್ಯಕರ್ತರ ವಿರುದ್ಧ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜ್ಯದ ಜನತೆಯನ್ನು ಮೂರ್ಖರನ್ನಾಗಿಸಿರುವ ಕಾಂಗ್ರೆಸ್ ಸರ್ಕಾರದ ಮುಖವಾಡ ಇದೀಗ ಇಡಿ ತನಿಖೆಯಿಂದ ಕಳಚಿ ಬೀಳಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.


ಮುಡಾದಲ್ಲಿ ನಡೆದಿರುವ ಬರೋಬ್ಬರಿ 5,000 ಕೋಟಿ ರೂ. ಅವ್ಯವಹಾರ ಸಣ್ಣ ವಿಚಾರವಲ್ಲ. ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಉಚಿತ ಗ್ಯಾರಂಟಿ ಕೊಡುಗೆಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದ್ದು, ಇದನ್ನು ವಸೂಲಿ ಮಾಡಿದರೆ ರಾಜ್ಯದ ಪಾಲಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಬಹುದು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಚಲೋ ರ‍್ಯಾಲಿ ನಡೆಸಿದ್ದು ಈ ಭ್ರಷ್ಟ ಸರ್ಕಾರ ವಿರುದ್ಧ ಜನಾಂದೋಲನ ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. ಆದರೆ, ಕರ್ನಾಟಕವನ್ನು ಲೂಟಿ ಮಾಡಿರುವ ತಪ್ಪಿತಸ್ಥರನ್ನು ಕಟಕಟೆಗೆ ತಂದು ನಿಲ್ಲಿಸುವವರೆಗೆ ನಮ್ಮ ಈ ಹೋರಾಟ ನಿಲ್ಲುವುದಿಲ್ಲ ಎಂದು ಸಂಸದರು ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget