ಕಾಸರಗೋಡು: ಮಂಜೇಶ್ವರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಣದಿಂದ ಹಿಂದೆ ಸರಿಯಲು ಪ್ರತಿಸ್ಪರ್ಧಿ ಅಭ್ಯರ್ಥಿಗೆ ಹಣ ನೀಡಿದ ಆರೋಪ ಎದುರಿಸುತ್ತಿದ್ದ ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಸಂಗಡಿಗರನ್ನು ಆರೋಪಮುಕ್ತಗೊಳಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಾನು ಎಸ್.ಪಣಿಕ್ಕರ್ ಆದೇಶ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸುರೇಂದ್ರನ್ ಪರ ವಕೀಲರು, 'ಪ್ರಾಥಮಿಕ ಹಂತದಲ್ಲಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ದುರುದ್ದೇಶದಿಂದ ಈ ಪ್ರಕರಣದಲ್ಲಿ ಸುರೇಂದ್ರನ್ ಅವರನ್ನು ಸಿಲುಕಿಸಲಾಗಿದೆ ಎಂಬ ವಾದವನ್ನು ನ್ಯಾಯಾಲಯವು ಪರಿಗಣಿಸಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ' ಎಂದು ತಿಳಿಸಿದರು.
ತೀರ್ಪಿನ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸುರೇಂದ್ರನ್, 'ಸತ್ಯವೇ ಮೇಲುಗೈ ಸಾಧಿಸಲಿದೆ' ಎಂಬುದನ್ನು ಮೊದಲಿನಿಂದಲೂ ಹೇಳಿದ್ದೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು, ಸುಳ್ಳು ಪ್ರಕರಣದ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ತಂತ್ರ ಹೆಣೆಯಲಾಗಿತ್ತು. ಸಿಪಿಎಂ, ಕಾಂಗ್ರೆಸ್ ಹಾಗೂ ಇಂಡಿಯನ್ ಮುಸ್ಲಿಂ ಲೀಗ್ ಮುಖಂಡರು ಈ ಸಂಚಿನ ಹಿಂದಿದ್ದರು' ಎಂದು ತಿಳಿಸಿದರು.
Post a Comment