ಮಂಗಳೂರು: ಮಂಗಳೂರು ನಗರ ಸೇರಿದಂತೆ ವಿವಿಧ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು ಬಂಧಿಸಿ 6 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿರುವ ಮಂಗಳೂರಿನ ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಪತ್ತೆ ಮಾಡಿ ನಟೋರಿಯಸ್ ಡ್ರಗ್ಸ್ ಪೆಡ್ಲರ್‌ನನ್ನು ಬಂಧಿಸಿರುವುದರ ಹಿನ್ನಲೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, "ಮಂಗಳೂರಿನ ಸಿಸಿಬಿ ಪೊಲೀಸರು ಈ ಬೃಹತ್ ಡ್ರಗ್ಸ್ ಜಾಲವನ್ನು ಬಯಲಿಗೆಳೆಯುವಲ್ಲಿ ಹಲವು ದಿನಗಳಿಂದ ಬೆನ್ನತ್ತಿ ಮಂಗಳೂರು, ಬೆಂಗಳೂರಿನಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಆ ಮೂಲಕ ಕರಾವಳಿಗೆ ಪೂರೈಕೆಯಾಗುತ್ತಿದ್ದ ಈ ಡ್ರಗ್ಸ್ ದಂಧೆಯ ಮೂಲವನ್ನೇ ಪತ್ತೆ ಮಾಡಿ ಇಷ್ಟೊಂದು ದೊಡ್ಡ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡ ಈ ಐತಿಹಾಸಿಕ ಕಾರ್ಯಾಚರಣೆಗೆ ಸಹಕರಿಸಿರುವ ಸಿಸಿಬಿಯ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯ" ಎಂದು ಹೇಳಿದ್ದಾರೆ.
ಸಂಸದನಾಗಿ ಆಯ್ಕೆಗೊಂಡ ಬಳಿಕ ನಡೆದ ಮೊದಲ ಸಂಸತ್ ಅಧಿವೇಶದಲ್ಲೇ ಕರಾವಳಿ ಸೇರಿದಂತೆ ದೇಶದೆಲ್ಲೆಡೆ ವ್ಯಾಪಕವಾಗುತ್ತಿರುವ ಡ್ರಗ್ಸ್ ಜಾಲವನ್ನು ತುರ್ತಾಗಿ ಮಟ್ಟ ಹಾಕಬೇಕೆಂದು ಒತ್ತಾಯಿಸಿದ್ದೆ. ಈ ಮಾದಕ ವಸ್ತುಗಳ ಜಾಲಕ್ಕೆ ಸಿಲುಕುತ್ತಿರುವ ಯುವಜನತೆಯನ್ನು ಅದರಿಂದ ಪಾರು ಮಾಡುವುದಕ್ಕೆ ನಾವೆಲ್ಲರೂ ಪೊಲೀಸರ ಜತೆಗೆ ಕೈಜೋಡಿಸಬೇಕೆಂದು ಹಲವು ವೇದಿಕೆಗಳಲ್ಲಿ ಪ್ರಸ್ತಾಪ ಕೂಡ ಮಾಡಿದ್ದೆ. ಹೀಗಿರುವಾಗ, ಡ್ರಗ್ಸ್ ಮುಕ್ತ ಕರಾವಳಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯ. ಪೊಲೀಸರ ಜತೆ ನಾವೆಲ್ಲರೂ ಕೈಜೋಡಿಸಿದರೆ ಆಳವಾಗಿ ಬೇರುಬಿಟ್ಟಿರುವ ಇಂಥಹ ಹಲವಾರು ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ಮೂಲಕ ಯಾವುದೋ ದೇಶದಿಂದ ಬಂದು ನಮ್ಮ ಯುವ ಸಮುದಾಯವನ್ನು ದಾರಿತಪ್ಪಿಸುವ ಜತೆಗೆ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ನಟೋರಿಯಸ್ ಪೆಡ್ಲರ್‌ಗಳನ್ನು ಜೈಲಿಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
Post a Comment