ಬೆಂಗಳೂರು: ‘ಕೇಂದ್ರ–ರಾಜ್ಯಗಳ ನಡುವೆ ದಶಕಗಳಿಂದಲೂ ತಿಕ್ಕಾಟವಿದೆ. ಆಗ, ರಾಜ್ಯಗಳ ಸಮಸ್ಯೆಗಳನ್ನು ಆಲಿಸಿ, ಚರ್ಚಿಸಿ, ಒಮ್ಮತದ ತೀರ್ಮಾನಕ್ಕೆ ಬಂದು ಪರಿಹಾರ ನೀಡಲಾಗುತ್ತಿತ್ತು. ಆದರೆ, ಈಗ ಸಮಸ್ಯೆಗಳನ್ನೂ ಆಲಿಸದೇ, ಸಮಸ್ಯೆ ಕೇಳಿದವರನ್ನೇ ದೇಶದ್ರೋಹಿ ಎನ್ನುವಂತಹ ಬದಲಾವಣೆಯ ವಾತಾವರಣ ನಿರ್ಮಾಣವಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು. ಕಾನ್‌ಕ್ಲೇವ್ ಮಾಧ್ಯಮ ಮತ್ತು ಪ್ರಕಾಶನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಪಿ.ಸುರೇಶ ಅವರು ಕನ್ನಡಕ್ಕೆ ಅನುವಾದಿಸಿರುವ ‘ದಕ್ಷಿಣ V/S ಉತ್ತರ’ ಕೃತಿಯನ್ನು (ಇಂಗ್ಲಿಷ್ ಮೂಲ: ನೀಲಕಂಠನ್ ಆರ್.ಎಸ್.) ಬಿಡುಗಡೆ ಮಾಡಿ ಅವರು ಮಾತನಾಡಿದರು.
‘60ರ ದಶಕದಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತ್ಯೇಕ ದೇಶದ ಕೂಗು ಎದ್ದಿತ್ತು. ಆಗ ಕೇಂದ್ರ ಸರ್ಕಾರ, ಅವರನ್ನು ದೇಶದ್ರೋಹಿಗಳು ಎನ್ನಲಿಲ್ಲ. ಬದಲಿಗೆ, ಅವರೊಂದಿಗೆ ಚರ್ಚಿಸಿ, ‘ಹಿಂದಿ ಆಡಳಿತ ಭಾಷೆ, ರಾಷ್ಟ್ರಭಾಷೆಯಲ್ಲ’ ಎಂದು ಸ್ಪಷ್ಟಪಡಿಸಿದ ಬಳಿಕ ಆ ರಾಜ್ಯದಲ್ಲಿ ಚಳವಳಿ ನಿಧಾನವಾಗಿ ತಣ್ಣಗಾಗಿತ್ತು’ ಎಂದು ನೆನಪು ಮಾಡಿದರು.
‘ದೇಶದ ಆರ್ಥಿಕತೆಗೆ ನಮ್ಮ ರಾಜ್ಯದಿಂದ ಶೇ 30 ರಿಂದ 35ರಷ್ಟು ಕೊಡುಗೆ ನೀಡುತ್ತಿದ್ದೇವೆ. ಆದರೆ ಪ್ರಸ್ತುತ ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯದ ಪಾಲು ಶೇ 20ರಿಂದ 22ರಷ್ಟು ಮಾತ್ರ. ಕ್ಷೇತ್ರ ಮರುವಿಂಗಡಣೆಯಾದರೆ ಇದು ಶೇ 20ಕ್ಕಿಂತ ಕಡಿಮೆಯಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
‘ಈ ಕೃತಿಯಲ್ಲಿ ಪ್ರಧಾನವಾಗಿ ಆದಾಯದ ಹಂಚಿಕೆ ಬಗ್ಗೆ ಉಲ್ಲೇಖಿಸಿದ್ದಾರೆ. ದೇಶದ ಸಾಮಾಜಿಕ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಸೂಚ್ಯಂಕಗಳ ಬಗ್ಗೆಯೂ ಸರಳವಾಗಿ ಅರ್ಥವಾಗುವಂತೆ ಬರೆದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನವನ್ನು ನ್ಯಾಯಯುತವಾಗಿ, ಹೆಚ್ಚು ಸಮಾನತೆಯಿಂದ ಹಂಚಿಕೆ ಮಾಡಬೇಕು. ಪ್ರಸ್ತುತ ಕರ್ನಾಟಕದಲ್ಲಿ ಶೇ 72ರಷ್ಟು ಸ್ವಂತ ಸಂಪನ್ಮೂಲದಿಂದ ಯೋಜನೆಗಳು ನಡೆಯುತ್ತಿವೆ. ಆದರೆ, ಬಿಹಾರದಲ್ಲಿ ಶೇ 77ರಷ್ಟು ವೆಚ್ಚ ಕೇಂದ್ರದ ಅನುದಾನದಿಂದ ನಡೆಯುತ್ತಿದೆ. ಈ ರಾಜ್ಯಗಳಿಗೆ ನಮ್ಮ ಸಂಪನ್ಮೂಲವೇ ಪೂರೈಕೆಯಾಗುತ್ತಿದೆ’ ಎಂದು ಹೇಳಿದರು.
‘ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ತಾರತಮ್ಯದ ಕುರಿತು ಚರ್ಚೆಯಾಗುತ್ತಿರುವ ಹೊತ್ತಲ್ಲಿ ಈ ಕೃತಿ ಬಂದಿರುವುದು ಸೂಕ್ತವಾಗಿದೆ. ರಾಜ್ಯದ ಎಲ್ಲ ಭಾಗದಲ್ಲೂ ಈ ಕೃತಿಯನ್ನು ಬಿಡುಗಡೆ ಮಾಡಿ, ಜನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ’ ಎಂದರು.
ಕೆ.ಎಸ್.ನಾಗೇಗೌಡ ಪ್ರಾಸ್ತಾವಿಕವಾಗಿ ಮಾಡಿದರು.
‘ಕ್ಷೇತ್ರ ವಿಂಗಡಣೆಯಲ್ಲೂ ಅನ್ಯಾಯದ ಹುನ್ನಾರ’ ‘ಭವಿಷ್ಯದಲ್ಲಿ ಲೋಕಸಭಾ ಕ್ಷೇತ್ರಗಳ ವಿಂಗಡಣೆಯಲ್ಲೂ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕಾಗಿ 2021–22ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಉದ್ದೇಶಪೂರ್ವಕವಾಗಿ 2026ರವರೆಗೆ ವಿಳಂಬ ಮಾಡಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು. ‘ಇಂದಿರಾ ಗಾಂಧಿಯವರ ಅವಧಿಯಲ್ಲಿ 1971ರ ನಂತರದ ಜನಗಣತಿ ಆಧಾರದಲ್ಲೇ 2026ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಮಾಡಬೇಕು ಎಂಬುದಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು. ಮುಂದಿನ ವರ್ಷ ಆ ನಿಯಮದ ಗಡುವು ಮುಗಿಯುತ್ತದೆ. ಅದಕ್ಕಾಗಿಯೆ 2026ರ ನಂತರ ಜನಗಣತಿ ಮಾಡುವ ಸಾಧ್ಯತೆ ಇದೆ. ಹಾಗೆ ಮಾಡಿದರೆ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು 70 ರಿಂದ 80 ಕ್ಷೇತ್ರಗಳು ಹೆಚ್ಚಾಗುತ್ತವೆ. ದಕ್ಷಿಣದ ರಾಜ್ಯಗಳಲ್ಲಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 129 ರಿಂದ 103ಕ್ಕೆ ಇಳಿಯಬಹುದು. ನಮ್ಮ ರಾಜ್ಯದ್ದು 26ಕ್ಕೆ ಇಳಿಯಬಹುದು. ಇದರಿಂದ ಭವಿಷ್ಯದಲ್ಲಿ ದಕ್ಷಿಣದ ರಾಜ್ಯಗಳನ್ನು ಇನ್ನಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.
Post a Comment