ಶಕ್ತಿ ಯೋಜನೆ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ಹರಡುತ್ತಿರುವ ಊಹಾಪೋಹಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: "ಸರ್ಕಾರದ ಮುಂದೆ ಶಕ್ತಿ ಯೋಜನೆ ಪರಿಷ್ಕರಿಸುವ ಪ್ರಸ್ತಾಪ ಇಲ್ಲ ಮತ್ತು ಉದ್ದೇಶನೂ ಇಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಣೆ ಸಂಬಂಧ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಸರ್ಕಾರದ ಮುಂದೆ ಆ ಪ್ರಸ್ತಾಪ ಇಲ್ಲ. ಕೆಲ ಮಹಿಳೆಯರು ಹೇಳುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ನನಗೆ ಗೊತ್ತಿಲ್ಲ. ಆ ಬಗ್ಗೆ ಮಾತನಾಡುತ್ತೇನೆ. ಸರ್ಕಾರದ ಮುಂದೆ ಪರಿಷ್ಕರಣೆ ಮಾಡುವ ಯೋಚನೆ ಇಲ್ಲ. ಆ ತರಹದ ಪ್ರಸ್ತಾವನೆ ಇಲ್ಲ. ಆ ತರಹದ ಉದ್ದೇಶವೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಉದ್ದೇಶದಿಂದ ಪ್ರತಿಭಟನೆ: ವಕ್ಫ್ ನೋಟೀಸ್ ಸಂಬಂಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಬಿಜೆಪಿ ರಾಜಕೀಯ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಸುಮಾರು 200 ನೋಟೀಸ್ ಕೊಟ್ಟಿದ್ದರಲ್ಲಾ?. ಅದಕ್ಕೆ ಏನು ಹೇಳುತ್ತಾರೆ. ಈ ಬಗ್ಗೆ ರಾಜಕೀಯ ಮಾಡಬಾರದು. ರೈತರಿಗೆ ನೀಡಿದ ನೋಟೀಸ್ ವಾಪಸ್ ಪಡೆಯಲು ನಾನು ಹೇಳಿದ್ದೇನೆ. ಈಗ ಏನಿದೆ ವಿವಾದ?. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದೂ ಹೇಳಿದ್ದೇವೆ. ಯಾವ ಜಿಲ್ಲೆಯಲ್ಲಾದರೂ ಆಗಿರಲಿ. ಬಿಜೆಪಿ ಅವಧಿಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ರೈತರಿಗೆ ನೋಟೀಸ್ ಕೊಟ್ಟಿದ್ದರು. ನ.4ಕ್ಕೆ ಮಾಡುವ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ. ಉಪಚುನಾವಣೆ ಹಿನ್ನೆಲೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಚುನಾವಣೆಗೋಸ್ಕರ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.
ಬಿಜೆಪಿಯವರು ಯಾವತ್ತೂ ಸತ್ಯ ಹೇಳುವುದಿಲ್ಲ: "ಬಿಜೆಪಿಯವರು ಇರುವುದೇ ರಾಜಕೀಯ ಮಾಡಲು. ಅವರು ಯಾವತ್ತೂ ಸತ್ಯ ಹೇಳುವುದಿಲ್ಲ. ಬರೇ ಸುಳ್ಳೇ ಹೇಳುವುದು. ವಿವಾದ ಇಲ್ಲದಿದ್ದರೂ ವಿವಾದ ಮಾಡುತ್ತಾರೆ. ಮುಡಾದಲ್ಲಿ ಏನಾದರು ವಿವಾದ ಇದೆಯಾ. ಅವರು ವಿವಾದವಲ್ಲದ ವಿಷಯವನ್ನು ವಿವಾದ ಮಾಡುತ್ತಿದ್ದಾರ" ಎಂದು ವಾಗ್ದಾಳಿ ನಡೆಸಿದರು.
"ನಾನು ನ.4ರಿಂದ ನ.11ರವರೆಗೆ ಪ್ರಚಾರಕ್ಕೆ ಹೋಗುತ್ತೇನೆ. ಮೂರು ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ನಾವು ಶಿಗ್ಗಾಂವಿಯಲ್ಲೂ ಗೆಲ್ಲುತ್ತೇವೆ, ಸಂಡೂರಲ್ಲೂ ಗೆಲ್ಲುತ್ತೇವೆ. ಚನ್ಬಪಟ್ಟಣದಲ್ಲೂ ಗೆಲ್ಲುತ್ತೇವೆ" ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಖಾದ್ರಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಹೆಚ್ ಡಿಕೆ ಆರೋಪ ವಿಚಾರವಾಗಿ ಮಾತನಾಡಿ, "ಕುಮಾರಸ್ವಾಮಿ ಸುಳ್ಳು ಹೇಳುವುದು ಬಿಟ್ಟು ಏನು ಹೇಳುತ್ತಾರೆ. ಬಿಜೆಪಿಯವರು, ಕುಮಾರಸ್ವಾಮಿ ಯಾವತ್ತೂ ಸುಳ್ಳೇ ಹೇಳುವುದು. ಯಾವುದನ್ನಾದರೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರಾ?. ಬರೇ ಸುಳ್ಳು ಆರೋಪ ಮಾಡುತ್ತಾರೆ" ಎಂದರು.
Post a Comment