ವಿವಿಧತೆಯಲ್ಲಿ ಏಕತೆಯ ದೇಶ, ನಮ್ಮ ಭಾರತ. ತಾಯಿ ಭಾರತಾಂಬೆಯ ಮಡಿಲಲ್ಲಿ ನಾವೆಲ್ಲರೂ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ. ಭಾರತದ ಹಿಂದೂಗಳಲ್ಲಿಎರಡು ಸಾವಿರಕ್ಕೂ ಅಧಿಕ ಜಾತಿಗಳಿವೆ. ಪ್ರತಿ ಜಾತಿಗೂ ಒಂದೊಂದು ರೀತಿಯ ಜೀವನ ಪದ್ದತಿ ಇದೆ. ಈ ರೀತಿಯ ಎಲ್ಲಾ ಜಾತಿ ಸಮುದಾಯಗಳು ಸೇರಿ ಹಿಂದೂ ಧರ್ಮ ಅಥವಾ ಹಿಂದೂ ಸಮಾಜ ಆಗಿದೆ. ನಮ್ಮ ನಮ್ಮ ತಾಯಿ ನೆಲದಲ್ಲಿ ಹರಿಯುವ ನದಿಗಳು ಕೂಡ ಬೇರೆ ಬೇರೆ ಹೆಸರಿನಿಂದ, ಬೇರೆ ಮೇಲ್ಮೈ ಲಕ್ಷಣಗಳಿಂದ ಹರಿದು ಕೊನೆಗೆ ಸಂಗಮವಾಗುವುದು ಸರೋವರದಲ್ಲಿ. ಹಾಗೆಯೇ ನಮ್ಮ ಹಿಂದೂ ಸಮಾಜ. ಹಾಗಿರುವಾಗ ನಮ್ಮಲ್ಲಿರುವ ತಾರತಮ್ಯ, ಮೇಲು ಕೀಳು, ಅಸ್ಪೃಶ್ಯತೆಯ ಮನೋಭಾವ, ಅಂದು ಯಾರೋ ಬಿತ್ತಿದ ವಿಷ ಬೀಜ ಇಂದು ಮರವಾಗಿ ಬೆಳೆದು ನಿಂತಿದೆ. ನಮ್ಮ ಧರ್ಮದಲ್ಲಿ ಇಲ್ಲದ ಇಂತಹ ಅನಿಷ್ಟ ಪದ್ದತಿಯನ್ನು ಬುಡ ಸಮೇತ ತೆಗೆದು ಹಾಕಲು ಒಂದಷ್ಟು ಮಹಾಪುರುಷರ ಪ್ರಯತ್ನಪಟ್ಟರೂ, ಸಂಪೂರ್ಣ ನಿರ್ನಾಮ ಮಾಡಲಾಗಲಿಲ್ಲ. ಕಸ ತುಂಬಿದ ಬಾವಿಯಿಂದ ನೀರು ತೆಗೆಯಲು ಬಿಂದಿಗೆಯನ್ನು ಎರಡು ಮೂರು ಬಾರಿ ಮುಳುಗಿಸಿ ಹೊರ ತೆಗೆದಾಗ ಕಸ ಕಡ್ಡಿ ಬದಿಗೆ ಸರಿದು ತಿಳಿ ನೀರು ಸಿಗುತ್ತದೆ. ಆದರೆ ಸ್ವಲ್ಪ ಸಮಯದಲ್ಲಿ ಆ ಕಸ ಕಡ್ಡಿಗಳು ಅದೇ ಜಾಗಕ್ಕೆ ಬರುತ್ತದೆ. ಹಾಗಾಯಿತು ನಮ್ಮ ಹಿರಿಯರು ಪಟ್ಟ ಪ್ರಯತ್ನಗಳು.
ಇದರಿಂದಾಗಿ ಇಂದು ನಮ್ಮ ಸಮಾಜದಲ್ಲಿ ಸಾಮರಸ್ಯದ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ದೇಶದ ಮೇಲೆ ಅದೆಷ್ಟೋ ವಿದೇಶಿಯರು ದಾಳಿ ಮಾಡಿದರು. ಎಲ್ಲರೂ ನಮ್ಮ ಜಾತಿ ವ್ಯವಸ್ಥೆಯನ್ನು ತಮ್ಮ ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಂಡು ಹಿಂದೂಗಳನ್ನು ಬೇರೆ ಬೇರೆಯಾಗಿ ಇಟ್ಟರು. ಇದರಿಂದಾಗಿ ಅನೇಕ ಹಿಂದೂ ಸಮಾಜದ ಬಂಧುಗಳು ಜೊತೆಯಾಗಿ ಪರಕೀಯರ ವಿರುದ್ಧ ನಿಲ್ಲುವುದಕ್ಕೆ ಕಷ್ಟವಾಗಿತ್ತು. ಅದೆಷ್ಟೋ ನಮ್ಮ ಆಚಾರ ವಿಚಾರಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತ ಬಂದರು. ಆದರೂ ನಮ್ಮ ಅನೇಕ ಮಹಾಪುರುಷರು ಹಿಂದೂಗಳ ಒಗ್ಗೂಡಿಸುವ ಪ್ರಯತ್ನಕ್ಕೆ ಪ್ರಾಣ ತ್ಯಾಗ ಮಾಡಿದರು. ದೇಶ ಸ್ವಾತಂತ್ರ್ಯಗೊಂಡ ನಂತರ ಅನೇಕ ರಾಜಕೀಯ ಪಕ್ಷಗಳು ಜಾತಿಯ ಆಧಾರದ ಮೇಲೆ ಹಿಂದೂಗಳನ್ನು ಒಡೆದು ಆಳುವ ಅಧಿಕಾರ ಮುಂದುವರೆಸಿದವು. ಹಿಂದೂಗಳ ಏಕತೆಗೆ ಪ್ರಯತ್ನ ಮಾಡಲೇ ಇಲ್ಲ.
ಅಂದು ಅಪ್ಪಟ ದೇಶ ಪ್ರೇಮಿ, ಎಲ್ಲಾ ಹಿಂದೂ ಬಂಧುಗಳನ್ನು ಒಗ್ಗೂಡಿಸಬೇಕೆಂಬ ನಿಟ್ಟಿನಲ್ಲಿ, ಈ ತಾಯಿ ನೆಲದ ಸಂಸ್ಕೃತಿಯನ್ನು ಉಳಿಸಬೇಕೆಂದು ರಾಷ್ಟ್ರೀಯ ಸ್ವಯಂ ಸಂಘ ವಿಜಯದಶಮಿಯಂದು ಸ್ಥಾಪಿಸಿದರು. ಅನೇಕ ವಿಚಾರಧಾರೆಗಳ ನಡುವೆ ವಿಶ್ವದಾದ್ಯಂತ ತನ್ನ ಕಾರ್ಯವನ್ನು ಮುಂದುವರೆಸಿಕೊಂಡು ಇದೀಗ ಶತಮಾನದ ಹೊಸ್ತಿಲಲ್ಲಿದೆ. ಸಾಮರಸ್ಯದ ಬದುಕಿಗೆ ಅಂದರೆ ಜಾತಿ ಸಮುದಾಯಗಳ ನಡುವೆ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಪ್ರಾರಂಭದಿಂದ ಇಂದಿನವರೆಗೂ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮಂಗಳೂರು ವಿಭಾಗದ ಸಾಮರಸ್ಯ ವೇದಿಕೆಯು ತುಡಾರ್ ಅನ್ನುವ ವಿಶೇಷ ಚಟುವಟಿಕೆಯೊಂದಿಗೆ ಸಾಮರಸ್ಯದ ನವ್ಯ ಯುಗಕ್ಕೆ ಆಮಂತ್ರಣ ನೀಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ತುಡಾರ್ ಇಂದು ಹಳ್ಳಿ ಹಳ್ಳಿಗಳಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಮುಂದುವರೆಸಿದೆ.
ತುಡಾರ್ ಅಂದರೆ ನಂದಾ ದೀಪ. ಈ ದೀಪಗಳ ಹಬ್ಬವನ್ನು ಸನಾತನ ಹಿಂದೂ ಧರ್ಮದಲ್ಲಿ ದೀಪಾವಳಿ ಎಂದು ಆಚರಿಸುತ್ತೇವೆ. ದೀಪ ಉರಿಸುವ ಮೂಲಕ ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ಹೆಚ್ಚಿಸುತ್ತದೆ. ಹಾಗೆಯೇ ಈ ತುಡಾರ್ ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳು, ತಾರತಮ್ಯ ಎಂಬ ಮಾನಸಿಕತೆಯನ್ನು ತೊರೆದು ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು ನಾವೆಲ್ಲರೂ ಬಂಧುಗಳು ಎಂಬ ಘೋಷಣೆಯೊಂದಿಗೆ ತುಡಾರ್ ಕಾರ್ಯಕ್ರಮದ ಆಯೋಜನೆ.
ಸಮಾಜದ ಗಣ್ಯರು ಭಾಗಿ
ಅಸ್ಪೃಶ್ಯತೆ ಅಥವಾ ಅಸಮಾನತೆಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಸಾಮರಸ್ಯ ವೇದಿಕೆಯು ಹಿಂದೂ ಸಮಾಜದ ಸಾಧು ಸಂತರನ್ನು, ಈಗ ನಮ್ಮ ನಡುವೆ ಇರುವ ಮೇಲ್ವರ್ಗ - ಕೆಳವರ್ಗದ ಹಿರಿಯರನ್ನು, ಗಣ್ಯರನ್ನು, ವಿವಿಧ ಸಂಘಟನೆ ಮುಖಂಡರನ್ನು ಸಂಪರ್ಕಿಸಿ ಜೊತೆಗೂಡಿಕೊಂಡು ರಾಜಕೀಯ ರಹಿತವಾಗಿ ತುಡಾರ್ ಆಚರಿಸುವುದು ವಿಶೇಷ.
ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ
ಪರಿಶಿಷ್ಟ ಜಾತಿಯ ಹಿರಿಯ ದಂಪತಿಗಳನ್ನು ಮುಂಭಾಗದಲ್ಲಿ, ಮತ್ತು ಸಮಾಜದ ವಿವಿಧ ಜಾತಿಯ ಎಲ್ಲಾ ಬಂಧುಗಳು ಒಟ್ಟಾಗಿ ದೇವಾಲಯದ ಒಳಗಡೆ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಅರ್ಚಕರು ವಿಶೇಷ ಪ್ರಾರ್ಥನೆಯೊಂದಿಗೆ ಗರ್ಭಗುಡಿಯಿಂದ ಉರಿಸಿ ತಂದ ತುಡಾರ್ ನ್ನು ಹಿರಿಯರಿಗೆ ಹಸ್ತಂತಾರಿಸುತ್ತಾರೆ.
ಭಜನೆ ಮತ್ತು ಜಯ ಘೋಷಣೆಯ ಯಾತ್ರೆ
ಹಿಂದು ಬಂಧುಗಳೆಲ್ಲರೂ ಅರ್ಚಕರಿಂದ ಪಡೆದ ತುಡರ್ ನ್ನು ಮೆರವಣಿಗೆಯಲ್ಲಿ ದೇವರ ನಾಮ ಸ್ಮರಣೆ, ತಾಯಿ ಭಾರತಾಂಬೆಯ ಘೋಷಣೆಯೊಂದಿಗೆ ಕಾಲೋನಿಯ ಬಂಧುಗಳ ಪ್ರತಿ ಮನೆಗೂ ಭೇಟಿ ನೀಡುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ಸಹಭೋಜನ ಅಥವಾ ಉಪಹಾರ
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಜೊತೆಯಾಗಿ ದಲಿತ ಬಂಧುವಿನ ಮನೆಯಲ್ಲಿ ಕುಳಿತು, ಆತನ ಮನೆಯಲ್ಲಿ ತಯಾರಿಸಿದ ಭೋಜನ ಅಥವಾ ಉಪಹಾರ ಸೇವಿಸುವುದು. ಈ ಮೂಲಕ ಸಮಾಜಕ್ಕೆ ಹಿಂದೂಗಳೆಲ್ಲರೂ ಒಂದು, ನಮ್ಮಲ್ಲಿ ಯಾವುದೇ ತಾರತಮ್ಯ,ಅಸ್ಪೃಶ್ಯತೆಯಿಲ್ಲ ಎಂಬುದನ್ನು ತಿಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಸ್ವಾಮೀಜಿಗಳ ಆಶೀರ್ವಚನ ಮತ್ತು ಬೌದ್ಧಿಕ್
ಕಾಲೋನಿಯ ಎಲ್ಲಾ ಮನೆಗಳಿಗೆ ಭೇಟಿ ನೀಡಿದ ನಂತರ ನಿಶ್ಚಯಿಸಿದ ಒಂದು ದಲಿತ ಬಂಧುವಿನ ಮನೆಯಲ್ಲಿ ಒಟ್ಟು ಸೇರುವುದು. ಮನೆಯಲ್ಲಿರುವ ಗೋ ಮಾತೆಗೆ ಪೂಜೆಯನ್ನು ಮಾಡಿ ಹಿಂದೂ ಹಬ್ಬಗಳನ್ನು ಹಿಂದೂಗಳೆಲ್ಲರೂ ಜೊತೆಯಾಗಿ ಆಚರಿಸಲಾಗುತ್ತದೆ.
ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಾಮೀಜಿಯವರು ಸೇರಿದ ಬಂಧುಗಳನ್ನು ಆಶೀರ್ವದಿಸುತ್ತಾರೆ. ಸಮಾಜದಲ್ಲಿ ನಮ್ಮ ಬದುಕು ಹೇಗೆ ಮತ್ತು ಸಾಮರಸ್ಯದ ಬಗೆಗೆ, ಹಿಂದೂ ಸಮಾಜದ ಒಗ್ಗಟ್ಟಿನ ಬಗೆಗೆ ಅತಿಥಿಯಿಂದ ವಿಶೇಷ ಬೌದ್ಧಿಕ್ ಆಯೋಜಿಸಲಾಗುತ್ತದೆ.
ನೆನಪಿರಲಿ ಸ್ನೇಹಿತರೇ, ನಮ್ಮಲ್ಲಿರುವ ತಾರತಮ್ಯ ಅಥವಾ ಮೇಲು ಕೀಳು ಭೇದ ಭಾವ ನಾಶವಾಗದೆ ಸ್ವಸ್ಥ ಸಮಾಜ ಕಟ್ಟಲು ಅಸಾಧ್ಯ. ಹಿಂದೂಗಳನ್ನು ಒಗ್ಗೂಡಿಸುವುದು ಮತ್ತು ಹಿಂದೂ ಸಮಾಜದಲ್ಲಿ ಸಮಾನತೆ ಬೆಳೆಸುವುದು ಎರಡೂ ಒಂದೇಯಾಗಿದೆ. ಜಗತ್ತಿನಲ್ಲಿರುವ ಎಲ್ಲಾ ಜಾತಿ ಸಮುದಾಯದ ಬಂಧುಗಳು ಒಂದಾಗಿ ನಾವು ಹಿಂದೂ ಎಂದರೆ ಸಾಮರಸ್ಯದಿಂದ ಕೂಡಿದ ಸಮಾನತೆಯ ಸಮಾಜ ಕಟ್ಟಬಹುದು. ನಾವು ನಂಬುವ ದೇವರಿಗೆ ಭೇದ ಭಾವವಿಲ್ಲ. ಕುಡಿಯುವ ನೀರು, ಸೇವಿಸುವ ಗಾಳಿ, ಅಥವಾ ಈ ಪ್ರಕೃತಿಯಲ್ಲಿ ಯಾವುದಕ್ಕೂ ತಾರತಮ್ಯವಿಲ್ಲ. ಹಾಗಿದ್ದಲ್ಲಿ ನಮ್ಮಲ್ಲಿ ಈ ರೀತಿಯ ವ್ಯವಸ್ಥೆ ಬೇಕಾ? ಅನ್ನುವ ಬಗ್ಗೆ ನಾವೇ ಆತ್ಮವಲೋಕನ ಮಾಡಬೇಕಾಗಿದೆ. ನಮ್ಮ ಸಮಾಜದಲ್ಲರುವ ಬೇರೆ ಬೇರೆ ಜಾತಿಯ ಬಂಧುಗಳು ತಯಾರಿಸಿ ಹಚ್ಚಿದ ತುಡಾರ್ ನ್ನು ಆ ಭಗವಂತನೇ ಮೆಚ್ಚಿ ನಮ್ಮ ಇಷ್ಟಾರ್ಥ ಈಡೇರಿಸುತ್ತಾನೆ. ಈ ಜಾತಿಯತೆಯೆಂಬ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ಹಿಂದೂಗಳು ಒಂದಾಗಬೇಕಿದೆ. ನಮ್ಮ ನಡುವೆ ಜಾತಿಯ ವಿಷ ಬೀಜಗಳನ್ನು ಬಿತ್ತಿ ಬೆರ್ಪಡಿಸುವ ದುಷ್ಟ ಶಕ್ತಿಗಳ ವಿರುದ್ಧ ಇಡೀ ಹಿಂದೂ ಸಮಾಜ ಒಂದಾಗಬೇಕಿದೆ.
ನ ಹಿಂದುಃ ಪತಿತೋ ಭವೇತ್ I
ಹಿಂದವಃ ಸೋದರಾಃ ಸರ್ವೇ II
✍🏻 ಡಾ.ರವೀಶ್ ಪಡುಮಲೆ
Post a Comment