ದೀಪಾವಳಿ ಹಬ್ಬದ ಪ್ರಯುಕ್ತ ಜನರು ನಗರಗಳಿಂದ ತಮ್ಮ ಊರುಗಳತ್ತ ಮುಖ ಮಾಡಿದ್ದು, ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆ ಸಂಬಂಧ ದೂರುಗಳ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಸಾಲು-ಸಾಲು ರಜೆಗಳು ಇರುವ ಹಿನ್ನೆಲೆಯಲ್ಲಿ ನಗರದಿಂದ ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇದೇ ವೇಳೆ, ಕೆಲ ಖಾಸಗಿ ಬಸ್ನವರು ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆ ದೂರುಗಳು ಕೇಳಿಬಂದ ಬೆನ್ನಲ್ಲೇ, ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ನೇತೃತ್ವದ ತಂಡದಿಂದ ಮೆಜೆಸ್ಟಿಕ್ ಸೇರಿ ನಗರದ ಪ್ರಮುಖ ಖಾಸಗಿ ಬಸ್ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ಖಾಸಗಿ ಬಸ್‌ಗಳಲ್ಲಿ ತೆರಳುತ್ತಿರುವ ಪ್ರಯಾಣಿಕರಿಂದ ಮಾಹಿತಿ ಪಡೆಯುತ್ತಿರುವ ಅಪರ ಸಾರಿಗೆ ಆಯುಕ್ತರು, ಹೆಚ್ಚಿನ ದರ ವಿಧಿಸುವ ಟ್ರಾವೆಲ್ಗಳ ಬಗ್ಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಈ ಕುರಿತಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಅಧ್ಯಕ್ಷತೆಯಲ್ಲಿ ಅಪರ ಸಾರಿಗೆ ಆಯುಕ್ತರ ಉಪಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಸಾಮಾನ್ಯ ದರಕ್ಕಿಂತ ಹೆಚ್ಚುವರಿ ದರವನ್ನು ಪಡೆಯದಂತೆ ನಿರ್ದೇಶನ ನೀಡಲಾಗಿತ್ತು. ಆದರೂ ದುಪ್ಪಟ್ಟು ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟು ಮಾಡುವ ವಾಹನಗಳ ಮಾಲೀಕರ ಮೇಲೆ ರಹದಾರಿ ಮತ್ತು ಆರ್ಸಿಯನ್ನು ಅಮಾನತು ಮಾಡಲು ಹಾಗೂ ಟಿಕೆಟ್ ವಿತರಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿತ್ತು.
ಆಯುಕ್ತರ ಪ್ರತಿಕ್ರಿಯೆ: ''ಬಸ್ ಪ್ರಯಾಣಕ್ಕೆ ಹೆಚ್ಚಿನ ದರ ಪಡೆದರೆ ಯಾವುದೇ ಹಿಂಜರಿಕೆ ಇಲ್ಲದೆ ದೂರು ನೀಡಬೇಕು. ಇದಲ್ಲದೆ ಪ್ರಯಾಣಿಕ ಸೇವಾ ವಾಹನಗಳಲ್ಲಿ ಅನಧಿಕೃತವಾಗಿ ಸ್ಫೋಟಕ ಸಾಮಗ್ರಿ ಹಾಗೂ ಇತರ ಸರಕು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರುಗಳ ವಿರುದ್ಧ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುವುದು'' ಎಂದು ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ಹೇಳಿದ್ದಾರೆ.
''ಖಾಸಗಿ ಬಸ್ ಸಂಘಗಳು ಸಾಮಾನ್ಯಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಸಂಗ್ರಹಿಸುವುದು ಕಂಡುಬಂದಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಯ 9449863429 ಹಾಗೂ 9449863426 ಮೂಲಕ ನಿಯಂತ್ರಣ ಕೊಠಡಿಗೆ ಕಚೇರಿಯ ಸಮಯದಲ್ಲಿ ಕರೆ ಮಾಡಿ ದೂರು ನೀಡಬಹುದು. ಅಥವಾ ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಿಗೆ ದೂರು ದಾಖಲಿಸಬಹುದಾಗಿದೆ'' ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
Post a Comment