IND vs PAK: ರಣರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಟೀಂ ಇಂಡಿಯಾ

 


Emerging Asia Cup 2024: ಒಮಾನ್​ನಲ್ಲಿ ನಿನ್ನೆಯಿಂದ ಅಂದರೆ ಅಕ್ಟೋಬರ್ 18 ರಿಂದ ಆರಂಭವಾಗಿರುವ ಉದಯೋನ್ಮುಖ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಇಂದು ನಡೆದ ಹೈವೋಲ್ಟೇಜ್ ಕದನದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 7 ರನ್​ಗಳಿಂದ ಮಣಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಒಮಾನ್​ನಲ್ಲಿ ನಿನ್ನೆಯಿಂದ ಅಂದರೆ ಅಕ್ಟೋಬರ್ 18 ರಿಂದ ಆರಂಭವಾಗಿರುವ ಉದಯೋನ್ಮುಖ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಇಂದು ನಡೆದ ಹೈವೋಲ್ಟೇಜ್ ಕದನದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 7 ರನ್​ಗಳಿಂದ ಮಣಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ವಾಸ್ತವವಾಗಿ ಪಂದ್ಯಾವಳಿಯಲ್ಲಿ ಎರಡೂ ತಂಡಗಳಿಗು ಇದು ಮೊದಲ ಪಂದ್ಯವಾಗಿತ್ತು. ಹೀಗಾಗಿ ಉಭಯ ತಂಡಗಳು ಗೆಲುವಿನೊಂದಿಗೆ ಪಂದ್ಯಾವಳಿ ಆರಂಭಿಸಲು ಎದುರು ನೋಡುತ್ತಿದ್ದವು. ಕೊನೆಯವರೆಗೂ ಕುತೂಹಲದಿಂದ ಕೂಡಿದ್ದ ಈ ಪಂದ್ಯವನ್ನು ಅಂತಿಮವಾಗಿ ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ತಿಲಕ್ ವರ್ಮಾ ನಾಯಕತ್ವದ ಟೀಂ ಇಂಡಿಯಾ ಯಶಸ್ವಿಯಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಲಷ್ಟೇ ಶಕ್ತವಾಯಿತು.


ಭಾರತಕ್ಕೆ ಭರ್ಜರಿ ಆರಂಭ


ಮಸ್ಕತ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಪರ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅಬ್ಬರದ ಆರಂಭ ನೀಡಿದರು. ಇವರಿಬ್ಬರೂ ಪವರ್‌ಪ್ಲೇಯಲ್ಲಿಯೇ 68 ರನ್‌ಗಳ ಜೊತೆಯಾಟವಾಡಿದರು. ಈ ಅವಧಿಯಲ್ಲಿ ಇಬ್ಬರೂ ಸೇರಿ 5 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದರು. ನಂತರ ಸ್ಪಿನ್ನರ್‌ಗಳು ಬಂದ ತಕ್ಷಣ ಭಾರತದ ಇನ್ನಿಂಗ್ಸ್‌ ಕುಸಿಯಲಾರಂಭಿಸಿತು. 7 ಮತ್ತು 8ನೇ ಓವರ್‌ಗಳಲ್ಲಿ ಆರಂಭಿಕರಿಬ್ಬರೂ ಔಟಾದರೆ, ನೆಹಾಲ್ ವಧೇರಾ ಮತ್ತು ಆಯುಷ್ ಬಡೋನಿ ಯಾವುದೇ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.


ಈ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ತಿಲಕ್ ವರ್ಮಾ ಕೂಡ ನಿಧಾನಗತಿಯ ಆರಂಭವನ್ನು ಹೊಂದಿದ್ದರೂ ನಂತರ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಕೊನೆಯ ಓವರ್‌ಗಳಲ್ಲಿ ರಮಣದೀಪ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 17 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಕೊನೆಯ ಎಸೆತದಲ್ಲಿ ರಸಿಖ್ ದಾರ್ ಸಿಕ್ಸರ್ ಬಾರಿಸಿ ತಂಡವನ್ನು 183 ರನ್​ಗಳಿಗೆ ಕೊಂಡೊಯ್ದರು. ಪಾಕಿಸ್ತಾನ ಪರ ಸ್ಪಿನ್ನರ್ ಸುಫ್ಯಾನ್ ಮಕಿಮ್ 28 ರನ್‌ಗಳಿಗೆ 2 ಪ್ರಮುಖ ವಿಕೆಟ್ ಪಡೆದರು.


ಪಾಕ್ ತಂಡಕ್ಕೆ ಕಳಪೆ ಆರಂಭ


ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ನಾಯಕ ಮೊಹಮ್ಮದ್ ಹ್ಯಾರಿಸ್ ಎರಡನೇ ಎಸೆತದಲ್ಲಿಯೇ ಔಟಾದರು. ಆದಾಗ್ಯೂ, ಯಾಸಿರ್ ಖಾನ್ ಮತ್ತು ಖಾಸಿಮ್ ಅಕ್ರಂ ಸ್ಫೋಟಕ ಜೊತೆಯಾಟವನ್ನಾಡಿ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್​ಗೆ ತಂದರು. ಆದರೆ 9ನೇ ಓವರ್‌ ಎಸೆದ ನಿಶಾಂತ್ ಸಿಂಧು ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಪಾಕ್ ತಂಡದ ಒತ್ತಡ ಹೆಚ್ಚಿಸಿದರು. ಇದಾದ ನಂತರ ಬಂದ ಅರಾಫತ್ ಮಿನ್ಹಾಸ್ ಪ್ರತಿದಾಳಿ ಮಾಡುವ ಮೂಲಕ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರೆ, ಹೈದರ್ ಅಲಿ ಮತ್ತೊಂದು ಕಡೆಯಿಂದ ಹೋರಾಟ ತೋರಿದರು.


ಅಬ್ಬರಿಸಿದ ಮಧ್ಯಮ ಕ್ರಮಾಂಕ


ಇಬ್ಬರ ನಡುವಿನ ಈ ಜೊತೆಯಾಟವನ್ನು ಮುರಿಯುವಲ್ಲಿ ರಸಿಖ್ ದಾರ್ ಯಶಸ್ವಿಯಾದರು. ಆದರೆ ಇದಾದ ನಂತರ ಬಂದ ಹೊಸ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ ಬಂದ ತಕ್ಷಣ ಬೌಂಡರಿ ಮತ್ತು ಸಿಕ್ಸರ್​ಗಳ ಮಳೆಗರೆದರು. ಹೀಗಾಗಿ ಟೀಂ ಇಂಡಿಯಾ ಮತ್ತೆ ಒತ್ತಡಕ್ಕೆ ಸಿಲುಕಿತು. ಆದರೆ 17ನೇ ಓವರ್‌ನಲ್ಲಿ ಅರಾಫತ್ ಅವರನ್ನು ಔಟ್ ಮಾಡುವ ಮೂಲಕ ರಸಿಖ್ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಸಮದ್ ಅವರನ್ನು ಅನ್ಶುಲ್ ಕಾಂಬೋಜ್ ತಮ್ಮ ಮೊದಲ ಎಸೆತದಲ್ಲಿಯೇ ಔಟ್ ಮಾಡಿ, ಭಾರತದ ಗೆಲುವನ್ನು ಖಚಿತಪಡಿಸಿದರು. ಈ ಓವರ್‌ನಲ್ಲಿ ಅನ್ಶುಲ್ ಕೇವಲ 9 ರನ್ ಬಿಟ್ಟುಕೊಟ್ಟು ತಂಡಕ್ಕೆ 7 ರನ್​ಗಳ ಜಯ ತಂದುಕೊಟ್ಟರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget