ಅದು ಬಡ ಬಗ್ಗರ ಸಹಾಯಕ್ಕಿರುವ ಸಹಕಾರ ಇಲಾಖೆಯ ಬ್ಯಾಂಕ್. ಅಲ್ಲಿ ಬ್ಯಾಂಕ್ ಮ್ಯಾನೇಜರ್ ನಕಲಿ ಖಾತೆ ಸೃಷ್ಟಿಸಿ ಕೋಟಿ ಕೋಟಿ ಹಣ ಗೋಲ್ ಮಾಲ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಖುದ್ದು ಆ ಇಲಾಖೆಯೇ ತನಿಖೆ ನಡೆಸಿ ಅಕ್ರಮ ಬಯಲಿಗೆಳೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ರಾಯಚೂರು, ಅ.02: ರಾಯಚೂರಿನಲ್ಲಿ ಸಹಕಾರ ಇಲಾಖೆಯ ಆರ್‌ಡಿಸಿಸಿ ಬ್ಯಾಂಕ್(Rdcc Bank)ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿರುವುದು ಬೆಳಕಿಗೆ ಬಂದಿದೆ. ಆರ್‌ಡಿಸಿಸಿಯ ರಾಯಚೂರು(Raichur) ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದ್ಗಲ್ ಪಟ್ಟಣದ ಶಾಖೆಯಲ್ಲಿ ಒಟ್ಟು 22 ಗ್ರಾಹಕರಿಗೆ 2.20 ಕೋಟಿ ರೂಪಾಯಿ ಆಕ್ರಮ ವರ್ಗಾವಣೆ ಆಗಿರುವ ಆರೋಪ ಕೇಳಿ ಬಂದಿತ್ತು. ಇಷ್ಟು ದೊಡ್ಡ ಭ್ರಷ್ಟಾಚಾರದ ಕುರಿತು ತನಿಖೆ ಮಾಡಿದಾಗ ಮುದಗಲ್ ಶಾಖೆಯ ಮ್ಯಾನೇಜರ್ ಶಿವಪುತ್ರಪ್ಪನೇ ಕಿಂಗ್ ಪಿನ್ ಎನ್ನುವುದು ಇಲಾಖಾ ತನಿಖೆಯಲ್ಲಿ ಬಯಲಾಗಿದೆ. ನಿಯಮಗಳನ್ನ ಉಲ್ಲಂಘಿಸಿ ನೇರವಾಗಿ ಆರ್‌ಡಿಸಿಸಿ ಬ್ಯಾಂಕ್‌ನಿಂದ ಹಣ ಪಾವತಿಸಿರುವುದು ತಿಳಿದುಬಂದಿದೆ.
ಹೌದು, ಮುದಗಲ್ ಶಾಖೆಯ ಮ್ಯಾನೇಜರ್ ಶಿವಪುತ್ರಪ್ಪ ಈ ಹಣ ಗುಳುಂ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ಬ್ಯಾಂಕ್ನ 11 ಜನ ಸಿಬ್ಬಂದಿಯ ಐಡಿ ಬಳಸಿ, ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆಯಾಗಿದ್ದು ಇಲಾಖಾ ತನಿಖೆಯಲ್ಲಿ ಗೊತ್ತಾಗಿದೆ. 2017 ಜೂನ್ನಿಂದ ಸೆಪ್ಟೆಂಬರ್ 2020 ರವರೆಗೂ ಹಂತ ಹಂತವಾಗಿ ಹಣ ಅಬೇಸ್ ಮಾಡಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶವಾದ ಬೆನ್ನಲ್ಲೇ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು ವಿಚಾರಣೆ ನಡೆಸಿದರು. ಈ ಇಲಾಖಾ ತನಿಖೆ ವೇಳೆ ಒಟ್ಟು 2 ಕೋಟಿ 20 ಲಕ್ಷ ಹಣ ದುರ್ಬಳಕೆ ಪತ್ತೆಯಾಗಿದೆ. ಈ ಬಗ್ಗೆ ಕೊಪ್ಪಳ-ರಾಯಚೂರು ಆರ್‌ಡಿಸಿಸಿ ಬ್ಯಾಂಕ್ನ ಚೇರ್ಮನ್ ವಿಶ್ವನಾಥ್ ಪಾಟೀಲ್ ಹಗರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕ್ರಮ ಕೈಗೊಳ್ಳೋ ಭರವಸೆ ನೀಡಿದ್ದಾರೆ.
ಇತ್ತ ಹಗರಣ ಬೆಳಕಿಗೆ ಬಂದ ಹಿನ್ನೆಲೆ ಮುದಗಲ್ ಶಾಖೆ ಮ್ಯಾನೇಜರ್ ಶಿವಪುತ್ರಪ್ಪರನ್ನ ಅಮಾನತ್ತು ಮಾಡಿ ಆದೇಶಿಸಿಲಾಗಿದೆ. ಅಲ್ಲದೇ ಅವ್ಯವಹಾರವಾಗಿರುವ ಕೋಟಿ ಕೋಟಿ ಹಣವನ್ನ ಆಡಳಿತ ವರ್ಗ ಹೇಗೆ ರಿಕವರಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Post a Comment