17.61 ಲಕ್ಷ ರೈತರಿಗೆ ₹2021.17 ಕೋಟಿ ಬೆಳೆ ವಿಮೆ: ಕೃಷಿ ಸಚಿವ ಚಲುವರಾಯಸ್ವಾಮಿ

 


ಬೆಂಗಳೂರು: 'ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 17.61 ಲಕ್ಷ ರೈತರಿಗೆ ₹2021.17 ಕೋಟಿ ಮೊತ್ತದ ಬೆಳೆ ವಿಮೆ ಪರಿಹಾರ ನೀಡಲಾಗಿದೆ' ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಮಾತನಾಡಿದ ಅವರು, 'ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 22.97 ಲಕ್ಷ ರೈತರು 17.60 ಲಕ್ಷ ಹೆಕ್ಟೇ‌ರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಈವರೆಗೆ 25,148 ರೈತರು 31,690 ಹೆಕ್ಟೇರ್ ಪ್ರದೇಶಕ್ಕೆ ನೋಂದಣಿ ಮಾಡಿಸಿದ್ದಾರೆ' ಎಂದರು.


'ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ, ಪರವಾಲಂಬಿ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪಿಸಲಾಗುವುದು' ಎಂದು ಅವರು ತಿಳಿಸಿದರು.


'ಕೇಂದ್ರ ಪುರಸ್ಕೃತ ಯೋಜನೆಗಳಡಿ 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ₹297 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

'ಬೆಳೆಗಳಲ್ಲಿ ಕಂಡುಬರುವ ಕೀಟ, ರೋಗಬಾಧೆ ಮತ್ತು ಪೋಷಕಾಂಶಗಳ ಕೊರತೆಯನ್ನು ನಿಖರವಾಗಿ ಗುರುತಿಸಿ, ಪೀಡೆ ಬಾಧೆಯ ತೀವ್ರತೆಗೆ ಅನುಗುಣವಾಗಿ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಲುಪಿಸಲು ಇ-ಸ್ಯಾಪ್ ತಂತ್ರಜ್ಞಾನವನ್ನು ಜಾರಿಗೊಳಿಸಿ ಇಲ್ಲಿಯವರೆಗೆ 70,016 ರೈತರಿಗೆ 1,30,152 ವಿವಿಧ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ. ಮಣ್ಣು ಪರೀಕ್ಷೆಗೆ ಭೂಸಾರ ತಂತ್ರಾಂಶ ಬಳಸಿ 4.76 ಲಕ್ಷ ಮಣ್ಣು ಮಾದರಿಗಳ ಪರೀಕ್ಷಿಸುವ ಗುರಿ ಇದ್ದು, ಇಲ್ಲಿಯವರೆಗೆ 4.54 ಲಕ್ಷ ಮಣ್ಣು ಮಾದರಿಗಳನ್ನು ಸಂಗ್ರಹಿಸಿದ್ದು, 2.30 ಲಕ್ಷ ಮಣ್ಣು ಮಾದರಿಗಳನ್ನು ವಿಶ್ಲೇಷಿಸಿ 1.58 ಲಕ್ಷ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ' ಎಂದರು.


'ಕೃಷಿಯಲ್ಲಿ ಯಾಂತ್ರಿಕತೆ ಪ್ರೋತ್ಸಾಹಿಸಲು ಪ್ರಸಕ್ತ ಸಾಲಿನಲ್ಲಿ ಈವರೆಗೆ 20,301 ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ವಿತರಿಸಲಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ 2024-25ನೇ ಸಾಲಿನಲ್ಲಿ 100 ಹೈಟೆಕ್‌ ಹಾರ್ವೆಸ್ಟ‌ರ್ ಹಬ್‌ಗಳನ್ನು ₹45 ಕೋಟಿಗಳ ಅನುದಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ' ಎಂದರು.


ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು ಸಭೆಯಲ್ಲಿ ಇದ್ದರು.

ಕಟ್-ಆಫ್ ಬಾಕ್ಸ್ - ಪ್ರಸಕ್ತ ವಿವಿಧ ಸಾಲಿನ ಕೃಷಿ ಬೆಳೆ ಮಾಹಿತಿ ಮುಂಗಾರು ಹಂಗಾಮು 82.48 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ 81.36 ಲಕ್ಷ ಹೆಕ್ಟೇರ್ (ಶೇ 99) ಸಾಧನೆ


ಹಿಂಗಾರು ಹಂಗಾಮು* 25.53 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ 13.38 ಲಕ್ಷ ಹೆಕ್ಟೇರ್ (ಶೇ 52) *ನವೆಂಬರ್ 15ರವರೆಗೆ

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget