IND vs AUS 1st Test: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 295 ರನ್ಗಳ ಅಧಿಕಾರಯುತ ಗೆಲುವು ಸಾಧಿಸಿದೆ.
IND vs AUS, 1st Test: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಪರ್ತ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಇಂದು 295 ರನ್ಗಳಿಂದ ಬೃಹತ್ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ಗಳಿಸಿ ಬ್ಯಾಟಿಂಗ್ನಲ್ಲಿ ವಿಫಲವಾಗಿತ್ತು. ಆದರೆ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಕಾಂಗರೂ ಪಡೆಯನ್ನು 104 ರನ್‌ಗಳಿಗೆ ಕಟ್ಟಿ ಹಾಕಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಲಯ ಕಂಡುಕೊಂಡ ಬ್ಯಾಟರ್ಗಳು ರನ್ ಮಳೆ ಹರಿಸಿದರು. ಆರಂಭಿಕರಾಗಿ ಬಂದ ಯಶಸ್ವಿ ಜೈಸ್ವಾಲ್ (161), ಕೆ.ಎಲ್.ರಾಹುಲ್ (77) ರನ್ ಗಳಿಸಿ ಆಸ್ಟ್ರೇಲಿಯಾ ನೆಲದಲ್ಲಿ ಹೆಚ್ಚು ರನ್ಗಳ ಜೊತೆಯಾಟವಾಡಿದ ಜೋಡಿಯಾಗಿ ದಾಖಲೆ ಬರೆಯಿತು. ಬಳಿಕ ಬಂದ ವಿರಾಟ್ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಭಾರತ 487/6 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ ಭಾರತ 534 ರನ್ಗಳ ಬೃಹತ್ ಗುರಿ ನೀಡಿತು.
ಈ ಗುರಿ ಬೆನ್ನತ್ತಿದ ಆಸೀಸ್ ಪಡೆ 17 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ಗಳಾದ ಮೆಕ್ಸ್ವೀನಿ ಶೂನ್ಯಕ್ಕೆ ನಿರ್ಗಮಿಸಿದರೆ, ಪ್ಯಾಟ್ ಕಮಿನ್ಸ್ 2, ಲಬೋಶ್ಚಗೇನೆ 3 ರನ್‌ಗಳಿಗೆ ನಿರ್ಗಮಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ 3ನೇ ದಿನದಾಟಕ್ಕೆ 12 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ನಾಲ್ಕನೇ ದಿನವಾದ ಇಂದೂ ಕೂಡಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾಂಗರೂ ಪಡೆ ಉಳಿದ 7 ವಿಕೆಟ್ಗಳನ್ನು ಕಳೆದುಕೊಂಡು ಹೀನಾಯ ಸೋಲನುಭವಿಸಿತು. ಇದರೊಂದಿಗೆ ಭಾರತ ಹೊಸ ದಾಖಲೆ ಬರೆಯಿತು.
ಪರ್ತ್ನಲ್ಲಿ ಭಾರತ ಹೊಸ ದಾಖಲೆ: ಆಸೀಸ್ ವಿರುದ್ಧ ಮೊದಲ ಪಂದ್ಯ ಗೆಲ್ಲುತ್ತಿದ್ದಂತೆ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ. ಟೆಸ್ಟ್ ಪಂದ್ಯದಲ್ಲಿ ಪರ್ತ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾವನ್ನು ಇದುವರೆಗೂ ಯಾವುದೇ ತಂಡಳು ಮಣಿಸಿಲ್ಲ. ಈ ಮೈದಾನದಲ್ಲಿ ಈ ಹಿಂದೆ ಒಟ್ಟು 4 ಪಂದ್ಯಗಳು ನಡೆದಿದ್ದು ಆಸ್ಟ್ರೇಲಿಯಾ ಎಲ್ಲದರಲ್ಲೂ ಗೆಲುವು ಸಾಧಿಸಿ ಅಜೇಯ ತಂಡವಾಗಿ ಓಟ ಮುಂದುವರೆಸಿತ್ತು. ಆದರೆ ಭಾರತ ಕಾಂಗರೂ ಓಟಕ್ಕೆ ಬ್ರೇಕ್ ಹಾಕಿದೆ. 6 ವರ್ಷಗಳ ಬಳಿಕ ಪರ್ತ್ ಮೈದಾನದಲ್ಲಿ ಆಸ್ಟ್ರೇಲಿಯಾ ಸೋಲಿಸಿದ ಮೊದಲ ತಂಡವಾಗಿ ದಾಖಲೆ ಬರೆಯಿತು.
Post a Comment