ಮಾರುತಿ ಸುಜುಕಿಯ 30 ಲಕ್ಷ ಕಾರುಗಳ ರಫ್ತು, ಹೊಸ ಮೈಲಿಗಲ್ಲು; ಕಿಯಾದ 1 ಲಕ್ಷ ಸಿಕೆಡಿ ಯೂನಿಟ್ಸ್ ರಫ್ತು



ನವದೆಹಲಿ:ಭಾರತದ ನಂಬರ್ ಒನ್ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ರಫ್ತು ವಿಚಾರದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದೆ. ಮಾರುತಿ ಸುಜುಕಿ ವಿದೇಶಕ್ಕೆ ರಫ್ತು ಮಾಡಿದ ವಾಹನಗಳ ಸಂಖ್ಯೆ 30 ಲಕ್ಷ ದಾಟಿದೆ. ಮೊನ್ನೆಯಷ್ಟೇ ಗುಜರಾತ್​ನ ಪಿಪವಾವ್ ಪೋರ್ಟ್​ನಿಂದ ಮಾರುತಿ ಸೆಲೆರಿಯೋ, ಫ್ರಾಂಕ್ಸ್ ಜಿಜ್ನಿ, ಬಲೇನೋ, ಸಿಯಾಜ್, ಡಿಜೈರ್ ಮತ್ತು ಎಸ್ ಪ್ರೆಸ್ಸೋ ಮಾಡಲ್​ನ 1,053 ಕಾರುಗಳನ್ನು ಬೇರೆ ದೇಶಗಳಿಗೆ ಕಳುಹಿಸಲಾಗಿದೆ. ಇದರೊಂದಿಗೆ ಒಟ್ಟಾರೆ ರಫ್ತಾಗಿರುವ ಮಾರುತಿ ಕಾರುಗಳ ಸಂಖ್ಯೆ 30 ಲಕ್ಷ ಗಡಿ ದಾಟಿದೆ. ಈ ರಫ್ತು ಮೈಲಿಗಲ್ಲು ಮುಟ್ಟಿದ ಭಾರತದ ಮೊದಲ ವಾಹನ ಕಂಪನಿಯಾಗಿದೆ ಮಾರುತಿ ಸುಜುಕಿ. ಭಾರತದ ಮಾರುತಿ ಉದ್ಯೋಗ್ ಮತ್ತು ಜಪಾನ್​ನ ಸುಜುಕಿ ಕಾರ್ಪೊರೇಶನ್ ಸಂಸ್ಥೆಗಳು ಜಂಟಿಯಾಗಿ ಸೇರಿ ನಡೆಸುತ್ತಿರುವ ಸಂಸ್ಥೆ ಮಾರುತಿ ಸುಜುಕಿ. 1987ರಲ್ಲಿ ಹಂಗೆರಿಗೆ 500 ಕಾರುಗಳನ್ನು ಕಳುಹಿಸುವ ಮೂಲಕ ಮಾರುತಿ ಸುಜುಕಿಯ ರಫ್ತು ಪ್ರಯಾಣ ಆರಂಭವಾಗಿತ್ತು. 2012-13ರಲ್ಲಿ 10 ಲಕ್ಷ ರಫ್ತು ಮೈಲಿಗಲ್ಲು ಮುಟ್ಟಿತು. ಇದಾಗಲು 25 ವರ್ಷ ಬೇಕಾಯಿತು. ಮತ್ತಷ್ಟು 10 ಲಕ್ಷ ಸಂಖ್ಯೆ ಮುಟ್ಟಲು 9 ವರ್ಷವಾಯಿತು. 20 ಲಕ್ಷದಿಂದ 30 ಲಕ್ಷ ಸಂಖ್ಯೆ ತಲುಪಲು 4 ವರ್ಷಕ್ಕಿಂತ ಕಡಿಮೆ ಅವಧಿ ಆಗಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮುಂಚೂಣಿಯಲ್ಲಿದೆ. ರಫ್ತು ಮಾರುಕಟ್ಟೆಯಲ್ಲೂ ನಂಬರ್ ಒನ್ ಎನಿಸಿದೆ. ಪ್ಯಾಸೆಂಜರ್ ವಾಹನಗಳಲ್ಲಿ ಶೇ. 40ರಷ್ಟು ರಫ್ತು ಮಾರುತಿ ಸುಜುಕಿಯಿಂದಲೇ ಆಗುತ್ತದೆ. ಅಕ್ಟೋಬರ್ ತಿಂಗಳಲ್ಲಿ 33,168 ಕಾರುಗಳನ್ನು ಅದು ರಫ್ತು ಮಾಡಿ ಹೊಸ ದಾಖಲೆ ಮಾಡಿತ್ತು. ಸೌತ್ ಕೊರಿಯಾ ಮೂಲದ ಕಿಯಾ ಸಂಸ್ಥೆಯ ಭಾರತೀಯ ಘಟಕವು ಒಂದು ಲಕ್ಷ ಸಿಕೆಡಿ ಕಾರುಗಳನ್ನು ರಫ್ತು ಮಾಡಿದೆ. ಸಿಕೆಡಿ ಎಂದರೆ ಕಂಪ್ಲೀಟ್ಲಿ ನಾಕ್ಡ್ ಡೌನ್. ಅಂದರೆ, ಅಸೆಂಬ್ಲಿಂಗ್​ಗೆ ಸಿದ್ಧವಾಗಿರುವ ಬಿಡಿಭಾಗಗಳನ್ನು ಹೊಂದಿರುವ ಘಟಕಗಳಿವು. ಈ ಭಾಗಗಳನ್ನು ಅಸೆಂಬ್ಲಿಂಗ್ ಮಾಡಿ ಪೂರ್ಣ ಕಾರನ್ನು ಸಿದ್ಧಪಡಿಸಬಹುದು. ಇದರ ಸಾಗಣೆ ಸುಲಭವಾಗುತ್ತದೆ. ತೆರಿಗೆ ಉಳಿಸಬಹುದು. ಹೀಗಾಗಿ, ಕಾರುಗಳನ್ನು ಸಿಕೆಡಿ ಘಟಕಗಳಾಗಿ ರಫ್ತು ಮಾಡಲಾಗುತ್ತದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget