ಮಹಾರಾಷ್ಟ್ರ: ಉತ್ತರಪ್ರದೇಶದ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಕುಂಡರ್ಕಿ(Kundarki) ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, ಈ ಕ್ಷೇತ್ರದಲ್ಲಿ 11 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಮುಸ್ಲಿಂ ಮೆಜಾರಿಟಿ ಕ್ಷೇತ್ರದಲ್ಲಿ ಬಿಜೆಪಿಯ ರಾಮ್ ವೀರ್ ಠಾಕೂರ್ 98,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಸಾಧಿಸುವ ಮೂಲಕ ಬರೋಬ್ಬರಿ 30 ವರ್ಷಗಳ ಬಳಿಕ ಭಾರತೀಯ ಜನತಾ ಪಕ್ಷ ಈ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕುಂಡರ್ಕಿ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಮತದಾರ ಸಮಾಜವಾದಿ ಪಕ್ಷವನ್ನು ತೊರೆದು ಬಿಜೆಪಿ ಕೈಹಿಡಿದಿದ್ದಾರೆ. ಮಹಾರಾಷ್ಟ್ರ, ಜಾರ್ಖಂಡ್ ಜತೆಗೆ ಉತ್ತರ ಪ್ರದೇಶದ 10 ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಇಂದು (ನ.23) ಬೆಳಗ್ಗೆ 8ಗಂಟೆಯಿಂದ ಮತಎಣಿಕೆ ಆರಂಭವಾಗಿತ್ತು.
ಕುಂಡರ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ವೀರ್ 30 ವರ್ಷಗಳ ಬಳಿಕ ಗೆಲುವು ಸಾಧಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದಾಗಿ ವರದಿ ತಿಳಿಸಿದೆ. 1993ರಲ್ಲಿ ಕುಂಡರ್ಕಿ ಕ್ಷೇತ್ರದಲ್ಲಿ ಬಿಜೆಪಿ ಕೊನೆಯದಾಗಿ ಗೆಲುವು ಸಾಧಿಸಿತ್ತು. 1993ರಲ್ಲಿ ಬಿಜೆಪಿಯ ಚಂದ್ರ ವಿಜಯ್ ಸಿಂಗ್ ಜಯಗಳಿಸಿದ್ದರು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಮ್ ವೀರ್ ಠಾಕೂರ್ ಅವರು ತಮ್ಮ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮೊಹಮ್ಮದ್ ರಿಜ್ವಾನ್ ವಿರುದ್ಧ ಜಯಭೇರಿ ಗಳಿಸಿದ್ದಾರೆ. ಕುಂಡರ್ಕಿ ಕ್ಷೇತ್ರದಲ್ಲಿ ಕಾನ್ಶಿ ರಾಮ್ ಅವರ ಅಜಾದ್ ಸಮಾಜ್ ಪಕ್ಷದ ಚಾಂದ್ ಬಾಬು, ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದ ಮೊಹಮ್ಮದ್ ವಾರಿಶ್ ಹಾಗೂ ಬಹುಜನ್ ಸಮಾಜ್ ಪಕ್ಷದ ರಫಾತುಲ್ಲಾಹ್ ಅಖಾಡದಲ್ಲಿದ್ದರು.
ಕುಂಡರ್ಕಿ ಪಶ್ಚಿಮ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ ಶೇ.60ಕ್ಕಿಂತ ಅಧಿಕ ಮುಸ್ಲಿಂ ಜನಸಂಖ್ಯೆ ಹೊಂದಿರುವುದಾಗಿ ವರದಿ ವಿವರಿಸಿದೆ.
ಕುಂಡರ್ಕಿ ವಿಧಾನಸಭಾ ಕ್ಷೇತ್ರದಲ್ಲಿ 11 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿದ್ದು, ಬಿಜೆಪಿ ಏಕೈಕ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಸಮಾಜವಾದಿ ಪಕ್ಷದ ಮೊಹಮ್ಮದ್ ರಿಜ್ವಾನ್ ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿದ್ದು, ಇಂಡಿಯಾ ಬ್ಲಾಕ್ ಅವರನ್ನು ಕಣಕ್ಕಿಳಿಸಿ ಪೈಪೋಟಿ ನೀಡಲು ಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರಾಮ್ ವೀರ್ ಠಾಕೂರ್ ಕೂಡಾ ಮುಸ್ಲಿಂ ಮತದಾರರ ಮನಗೆಲ್ಲುವಲ್ಲಿ ಪ್ರಯತ್ನಿಸಿದ್ದರು. ಬಿಜೆಪಿಯ ಮುಸ್ಲಿಂ ಘಟಕದ ಮುಖಂಡರು ಕೂಡಾ ಶ್ರಮವಹಿಸಿ ಪ್ರಚಾರ ಕಾರ್ಯ ನಡೆಸಿದ್ದರು.
Post a Comment