ಢಾಕಾ: ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬಂಧನ ಖಂಡಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ಚಟ್ಟೋಗ್ರಾಮದಲ್ಲಿ ಶುಕ್ರವಾರ ಮೂರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ.
ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ದಾಳಿ ನಡೆದಿದ್ದು, ಶಾಂತನೇಶ್ವರಿ ಮಾತ್ರಿ ದೇವಸ್ಥಾನ, ಸಮೀಪದ ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಲಿಬರಿ ದೇವಸ್ಥಾನವನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿದೆ ಎಂದು ಸುದ್ದಿ ಪೋರ್ಟಲ್ BDNews24.com ವರದಿ ಮಾಡಿದೆ.
ಘೋಷಣೆ ಕೂಗುತ್ತಾ ಬಂದ ನೂರಾರು ಜನರ ಗುಂಪು ದೇವಾಲಯಗಳ ಮೇಲೆ ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆದರು. ಇದರಿಂದ ಮೂರು ದೇವಾಲಯಗಳ ದ್ವಾರಗಳು ಹಾನಿಗೊಳಗಾಗಿವೆ ಎಂದು ದೇವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಪೋರ್ಟಲ್ ವರದಿ ಮಾಡಿದೆ.
ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಅಬ್ದುಲ್ ಕರೀಮ್ ದಾಳಿಯನ್ನು ದೃಢಪಡಿಸಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಸಮ್ಮಿಲಿತ್ ಸನಾತನಿ ಜಾಗರಣ ಜೋತೆ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ. ಅವರ ಬಂಧನ ಖಂಡಿಸಿ, ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿ ಹಿಂದೂ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
Post a Comment