ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ರಾಘವ ಕೊಲ್ಲಾಜೆಯವರು ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದ ಜಮೀನನ್ನು ರದ್ದುಪಡಿಸಿದೆ. ಈ ಕುರಿತು ವಿದ್ಯಾವರ್ಧಕ ಸಂಘ ಅಧಿಕೃತ ಹೇಳಿಕೆ ನೀಡಿದೆ.
ಪುತ್ತೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) 110ನೇ ವರ್ಷಕ್ಕೆ ಕಾಲಿಡುತ್ತಿದೆ. ಜಿಲ್ಲೆಯ ಹಿರಿಯರು 1915ರಲ್ಲಿ ಪ್ರಾರಂಭಿಸಿದ ಈ ನೋಂದಾಯಿತ ಸೊಸೈಟಿಯು ಪ್ರಥಮವಾಗಿ 1915ರಲ್ಲಿ ಪುತ್ತೂರಿನ ಬೋರ್ಡ್ ಹೈಸ್ಕೂಲ್‌ನಲ್ಲಿ ಸ್ಥಾಪಿಸಿ, ಹೈಸ್ಕೂಲ್ ಶಿಕ್ಷಣ ಪಡೆಯಲು ಮಂಗಳೂರಿಗೆ ತೆರಳಬೇಕಾಗಿದ್ದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೈಸ್ಕೂಲ್ ಶಿಕ್ಷಣವನ್ನು ಪಡೆಯಲು ವ್ಯವಸ್ಥೆ ಮಾಡಿತ್ತು. 1965ರಲ್ಲಿ ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜು ಆರಂಭಿಸಿತ್ತು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ, ಬೆಳ್ತಂಗಡಿ ಹಾಗೂ ಕೇರಳದ ಕಾಸರಗೋಡಿನ ಪೆರ್ಲ ಸಹಿತ ಒಟ್ಟು 89ಕ್ಕೂ ಅಧಿಕ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ, ಗುಣಮಟ್ಟದ ಸಂಸ್ಕಾರಯುತ ಶಿಕ್ಷಣಕ್ಕೆ ಸರ್ವ ಪ್ರಯತ್ನ ಮಾಡುತ್ತಿದೆ. ನೋಂದಾಯಿತ ಸೊಸೈಟಿಯಾಗಿ ಸರಕಾರದ ನಿಯಮ ಹಾಗೂ ಸೊಸೈಟಿಯ ಉಪ ನಿಬಂಧನೆಗಳನ್ವಯ ಕಾರ್ಯನಿರ್ವಹಿಸುತ್ತಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘವು ಬೆಳ್ತಂಗಡಿಯ ಗ್ರಾಮೀಣ ಪ್ರದೇಶ ಪಟ್ಟೂರು, ಮುಂಡಾಜೆ ಹಾಗೂ ಸುಕ್ಕೇರಿಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ತೆರೆದಿದ್ದು. ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕೊಕ್ಕಡ ಪರಿಸರದ ನಾಗರಿಕರ ಒತ್ತಾಸೆ ಮತ್ತು ವಿನಂತಿಯಂತೆ ಈ ಭಾಗದಲ್ಲಿ ಹೊಸತಾಗಿ ಶಿಕ್ಷಣ ಸಂಸ್ಥೆ ತೆರೆಯಲು ಸಂಘವು ಯೋಜನೆ ಮಾಡಿತ್ತು. ಆ ಸಮಯದಲ್ಲಿ ಕೊಕ್ಕಡದ ಹಿರಿಯರು/ ಗೌರವಾನ್ವಿತರು/ ಶಿಕ್ಷಣ ಪ್ರೇಮಿಗಳು/ ಸಮಾಜ ಸೇವಕರಾದ ರಾಘವ ಅವರು ಅವರ ಸ್ವಂತ ಸಂಪೂರ್ಣ ಹಕ್ಕಿನ ನೋಂದಾಯಿತ ಕ್ರಯಚೇಟು ಪ್ರಕಾರ ಖರೀದಿಸಿದ ಜಮೀನನ್ನು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ದಾನವಾಗಿ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು.
ಅದರಂತೆ ರಾಘವ ಅವರ ಹಕ್ಕಿನ ಕೊಕ್ಕಡ ಗ್ರಾಮದ ಜಮೀನನ್ನು ಸ್ವ ಇಚ್ಛೆಯಿಂದ ಸೆ. 17ರಂದು ಬೆಳ್ತಂಗಡಿ ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ನೋಂದಣಿಯಾದ ದಾನಪತ್ರ ದಸ್ತಾವೇಜು ಸಂಖ್ಯೆ 2818/204-25ರ ದಾಖಲೆ ಪ್ರಕಾರ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ದಾನವಾಗಿ ನೀಡಿದ್ದರು.
ಹಲವು ಸ್ಥಾಪಿತ ಹಿತಾಸಕ್ತಿಗಳು, ಸಮಾಜ ವಿರೋಧಿ ವ್ಯಕ್ತಿಗಳು ನಂತರದ ಬೆಳವಣಿಗೆಯಲ್ಲಿ ದಾನಪತ್ರವು ಸರಿ ಇಲ್ಲವೆಂದು ದುರುದ್ದೇಶದಿಂದ ಮಾಡುತ್ತಿರುವ ಅಪಪ್ರಚಾರಗಳಿಂದ ನೊಂದು, ವಿವೇಕಾನಂದ ವಿದ್ಯಾವರ್ಧಕ ಸಂಘವು ದಾನಪತ್ರವನ್ನು ನ 4ರಂದು ರದ್ದುಪಡಿಸಿದೆ. ಸದ್ರಿ ಆಸ್ತಿಯ ಹಕ್ಕುಗಳು ರಾಘವರಿಗೆ ಹಿಂತಿರುಗಿಸಲಾಗಿದೆ ಎಂದು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಯಂ.ಕೃಷ್ಣ ಭಟ್ ತಿಳಿಸಿದ್ದಾರೆ.
Post a Comment