ಮಂಗಳೂರು ವಿವಿ ಆಡಳಿತ ಸೌಧಕ್ಕೆ ವಿದ್ಯಾರ್ಥಿಗಳಿಂದ ಮುತ್ತಿಗೆ- ಏಕಾಏಕಿ ಶುಲ್ಕ ಏರಿಕೆ ವಿರುದ್ಧ ಕುಲಪತಿಗೆ ವಿದ್ಯಾರ್ಥಿಗಳ ತರಾಟೆ,

 ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ 60-80 ಪರ್ಸೆಂಟ್ ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ.



ಮಂಗಳೂರು, ನ.15: ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ 60-80 ಪರ್ಸೆಂಟ್ ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ, ವಿದ್ಯಾರ್ಥಿಗಳು ಆಡಳಿತ ಸೌಧ ಕಟ್ಟಡದ ಮುಂಭಾಗದ ಗಾಜನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಒಬ್ಬ ವಿದ್ಯಾರ್ಥಿಯ ಕೈಗೆ ಗಾಜು ತಾಗಿ ಗಾಯಗೊಂಡ ಘಟನೆಯೂ ನಡೆಯಿತು.



ಪೊಲೀಸರ ಬ್ಯಾರಿಕೇಡ್ ನಡುವೆಯೂ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ನುಗ್ಗಿ ಬಂದಿದ್ದು ಆಡಳಿತ ಸೌಧಕ್ಕೆ ಒಳನುಗ್ಗಲು ಯತ್ನಿಸಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ.ಪಿ.ಎಲ್ ಧರ್ಮ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು. ಪ್ರತಿಭಟನೆ ಮಾಡೋದು ವಿದ್ಯಾರ್ಥಿಗಳ ಹಕ್ಕು ಹಾಗೆಂದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡೋದು. ಗಾಜು ಪುಡಿ ಮಾಡೋದು ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.



ಬಳಿಕ ಆದಷ್ಟು ಶೀಘ್ರ ಸಮಸ್ಯೆ ಪರಿಹರಿಸುತ್ತೇನೆ ಎಂದು ಹೇಳಿದ ಕುಲಪತಿ ಮಾತಿಗೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ವೀಸಿ, ಸರ್ಕಾರದಿಂದ ದಿನನಿತ್ಯದ ಖರ್ಚಿಗೆ ಒಂದು ರೂಪಾಯಿ ಕೂಡ ಬರುತ್ತಿಲ್ಲ. ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ ಇದೆ. ಸರ್ಕಾರ ಆಂತರಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಿ ಅಂದಿದೆ. ಹೀಗಾಗಿ ಅನಿವಾರ್ಯವಾಗಿ ಶುಲ್ಕ ಹೆಚ್ಚಿಸಿದ್ದೇವೆ. ಆದರೂ ಸರ್ಕಾರ ಹೇಳಿರುವುದಕ್ಕಿಂತ ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ. ಆರು ವರ್ಷಗಳ ಬಳಿಕ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಗ್ರೇಡ್ ಮೂಲಕ ವರ್ಕ್ ನೀಡಬೇಕಾಗುತ್ತೆ. ಹೀಗಾಗಿ ಸರಿ ಮಾಡಲು ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಸರ್ಕಾರ ಇಲ್ಲಿಯವರೆಗೂ ಸರಿಪಡಿಸಿಲ್ಲ ಎಂದು ಅಸಹಾಯಕತೆ ತೋರಿದರು.



ವಿವಿ ಕುಲಪತಿ ಪಿ.ಎಲ್.ಧರ್ಮ ಸಮಜಾಯಿಷಿಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ಒಂದು ಹಂತದಲ್ಲಿ ಇಡೀ ದಿನ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಸಮಾಧಾನಕ್ಕೂ ಬಗ್ಗದೆ ಮತ್ತೆ ಧಿಕ್ಕಾರದ ಘೋಷಣೆ ಹಾಕಿದ್ದಾರೆ. ಏಕಾಏಕಿ 50-60 ಪರ್ಸೆಂಟ್ ಶುಲ್ಕ ಏರಿಸಿದ್ದೀರಿ, ಪರೀಕ್ಷಾ ಶುಲ್ಕ ಡಬಲ್ ಮಾಡಿದ್ದೀರಿ. ಕೇಳಿದರೆ ಖಾಸಗಿ ಯುನಿವರ್ಸಿಟಿ ಹೇಳೀರಿ, ಅಲ್ಲಿ ಫೀಸ್ ಜಾಸ್ತಿ ಇದೆ ಎಂದು ಇಲ್ಲಿಗೆ ಬರೋದಲ್ವಾ? ನಿಮಗೆ ಸರ್ಕಾರದ ಫಂಡ್ ಇಲ್ಲಾಂತ ವಿದ್ಯಾರ್ಥಿಗಳನ್ನು ಸುಲಿಗೆ ಮಾಡ್ತಿದೀರಾ.. ಕಳೆದ ಸಾಲಿನ ಪರೀಕ್ಷೆ ಮುಗಿದು ಫಲಿತಾಂಶ ಬಂದು ಆರು ತಿಂಗಳಾದರೂ ಅಂಕಪಟ್ಟಿ ಕೊಡುತ್ತಿಲ್ಲ. ಸಿಬಂದಿ, ಶಿಕ್ಷಕರಲ್ಲಿ ಕೇಳಿದರೆ ಗೊತ್ತಿಲ್ಲ ಅಂತಾರೆ, ಹಾಗಾಗಿ ಮಂಗಳೂರು ವಿವಿ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿ ಮುಖಂಡರು ನೇರವಾಗಿ ಕುಲಪತಿಯನ್ನು ತರಾಟೆಗೆತ್ತಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಲು ಕುಲಪತಿ ಧರ್ಮ ಅಸಾಹಯಕರಾದರು. ಸಂಜೆಯೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಇದೇ ವೇಳೆ, ಸಿಂಡಿಕೇಟ್ ಸದಸ್ಯರು ಮತ್ತು ಕುಲಪತಿ ಧರ್ಮ ತುರ್ತಾಗಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಕೆಲಹೊತ್ತಿನ ಬಳಿಕ ಸಿಂಡಿಕೇಟ್ ಸದಸ್ಯರ ಜೊತೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪ್ರೊ.ಧರ್ಮ, ನಾಳೆಯೇ ವಿವಿಯ ರಿಜಿಸ್ಟ್ರಾರ್ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಡುತ್ತೇವೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ವಿ.ಸಿ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ. ಇದೇ ವೇಳೆ, ಸಮಸ್ಯೆ ಬಗೆಹರಿಯದಿದ್ದರೆ ಮಂಗಳೂರು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget