ಬೆಳಗಾವಿ : ಕರ್ನಾಟಕದ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9 ರಿಂದ 20ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಧಿವೇಶನ ಕರೆದಿದ್ದಾರೆ. ಡಿಸೆಂಬರ್ 9 ಸೋಮವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಇತ್ತೀಚಿಗೆ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ್ದ ವಿಧಾಸಭಾಧ್ಯಕ್ಷ ಯು.ಟಿ ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿಕಾರಿಗಳ ಸಭೆ ನಡೆಸಿದ್ದರು. ಅಲ್ಲದೆ, ಅಧಿವೇಶನ ನಡೆಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡುವಂತೆ ಸೂಚನೆ ನೀಡಿದ್ದರು. ಈ ಬಾರಿಯ ಚಳಿಗಾಲ ಅಧಿವೇಶನ ಬಿಸಿ ಬಿಸಿ ಚರ್ಚೆ, ವಾಕ್ಸಮರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೈತರ ನಿದ್ದೆಗೆಡಿಸಿರುವ ವಕ್ಫ್ ಆಸ್ತಿ ವಿವಾದ ಚರ್ಚೆಗೆ ಪ್ರಮುಖ ಬಿಂದುಗಳಾಗಬಹದು. ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿವೆ. ಹಾಗೇ ಉತ್ತರ ಕರ್ನಾಟಕದ ಜಲ್ವಂತರ ಸಮಸ್ಯೆಗಳಾದ ಮೂಲಭೂತ ಸೌಕರ್ಯದ ವಿಚಾರಕ್ಕೆ ಈ ಬಾರಿಯಾದರೂ ಪರಿಹಾರ ಸಿಗುತ್ತಾ ಕಾದು ನೋಡಬೇಕಿದೆ. ಚಳಿಗಾಲದ ಅಧಿವೇಶನದ ಜೊತೆಗೆ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲೇ ಕಾಂಗ್ರೆಸ್ ಅಧಿವೇಶನ ನೆಡಸಲು ಪಕ್ಷ ತೀರ್ಮಾನಿಸಿದೆ. 1924 ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಹಾತ್ಮಾ ಗಾಂಧೀಜಿ ಮಾತನಾಡಿದ್ದರು. ಈ ಕಾರ್ಯಕ್ರಮಕ್ಕೆ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನೆಡೆಸಲು ನಿರ್ಧರಿಸಿದೆ.
Post a Comment