ಯುಪಿ, ರಾಜಸ್ಥಾನದಲ್ಲಿ ಬಿಜೆಪಿ, ಬಂಗಾಳದಲ್ಲಿ ಟಿಎಂಸಿಗೆ ಭರ್ಜರಿ ಗೆಲುವು: ಉಪ ಚುನಾವಣೆ ಫಲಿತಾಂಶ ಹೀಗಿದೆ

 14 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳೇ ಭರ್ಜರಿ ಜಯ ದಾಖಲಿಸಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕರ್ನಾಟಕದಲ್ಲಿ ಕಾಂಗ್ರೆಸ್​ ಕ್ಲೀನ್​ಸ್ವೀಪ್​ ಸಾಧಿಸಿವೆ.



ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್​ ವಿಧಾನಸಭೆ ಚುನಾವಣೆಯ ಜೊತೆಗೆ ನಡೆದಿದ್ದ 14 ರಾಜ್ಯಗಳ ವಿಧಾನಸಭೆ ಉಪ ಚುನಾವಣೆಯಲ್ಲಿ ಹೆಚ್ಚೂ ಕಡಿಮೆ ಆಯಾ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷಗಳು ಜಯಭೇರಿ ಬಾರಿಸಿವೆ.


ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಉಪ ಚುನಾವಣೆಗಳು ನಡೆದಿದ್ದವು.


ಅಸ್ಸಾಂನಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಇಲ್ಲಿ ನಡೆದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರರಲ್ಲಿ ಜಯ ಸಾಧಿಸಿದೆ. ಇನ್ನೆರಡದಲ್ಲಿ ಯುನೈಟೆಡ್​ ಪೀಪಲ್ಸ್​ ಪಕ್ಷ (ಲಿಬರಲ್​), ಅಸ್ಸಾಂ ಗಣ ಪರಿಷತ್​ ತಲಾ ಒಂದರಲ್ಲಿ ಜಯಿಸಿವೆ. ಬಿಹಾರದಲ್ಲಿ ನಡೆದ 4 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಯು ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 2, ಜೆಡಿಯು 1, ಇನ್ನೊಂದರಲ್ಲಿ ಹಿಂದುಸ್ತಾನಿ ಅವಾಮಿ ಮೋರ್ಚಾ ಗೆದ್ದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್​ ಕ್ಲೀನ್​​ಸ್ವೀಪ್​​; ಇನ್ನೂ, ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್​ ಭರ್ಜರಿ ಸಾಧನೆ ಮಾಡಿದೆ. ಮೂರೂ ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಬಿಜೆಪಿ ಮತ್ತು ಜೆಡಿಎಸ್​​ನ ಎನ್​ಡಿಎ ಮೈತ್ರಿಗೆ ಮುಖಭಂಗ ಮಾಡಿದೆ.


ರಾಜಸ್ಥಾನದ 7 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಅದರಲ್ಲಿ ಆಡಳಿತದಲ್ಲಿರುವ ಬಿಜೆಪಿ ಕಮಾಲ್​ ಮಾಡಿದೆ. 5 ಕ್ಷೇತ್ರಗಳಲ್ಲಿ ಕೇಸರಿ ಪಡೆ ಗೆಲುವು ಕಂಡಿದೆ. ಕಾಂಗ್ರೆಸ್​, ಭಾರತ್​ ಆದಿವಾಸಿ ಪಕ್ಷವು ತಲಾ ಒಂದರಲ್ಲಿ ಗೆದ್ದಿದೆ.


ಉತ್ತರಪ್ರದೇಶದಲ್ಲಿ 'ಯೋಗಿ' ಕಮಾಲ್: ಉತ್ತರಪ್ರದೇಶದ 9 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತದಲ್ಲಿರುವ ಬಿಜೆಪಿ 6 ರಲ್ಲಿ ಜಯ ಸಾಧಿಸಿದೆ. 2 ರಲ್ಲಿ ಸಮಾಜವಾದ ಪಕ್ಷ (ಎಸ್​​ಪಿ), ಇನ್ನೊಂದರಲ್ಲಿ ರಾಷ್ಟ್ರೀಯ ಲೋಕದಳ ಗೆದ್ದಿದೆ.


ಛತ್ತೀಸ್​ಗಢ, ಗುಜರಾತ್​ನ ತಲಾ ಒಂದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಕೇರಳದ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಮತ್ತು ಸಿಪಿಐ (ಎಂ) ತಲಾ ಒಂದರಲ್ಲಿ ಗೆದ್ದಿವೆ.

ಮಧ್ಯಪ್ರದೇಶದ 2 ಸ್ಥಾನಗಳಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ತಲಾ ಒಂದರಲ್ಲಿ ಜಯ ಸಾಧಿಸಿದರೆ, ಮೇಘಾಲಯದ ಒಂದು ಕ್ಷೇತ್ರದಲ್ಲಿ ಆಡಳಿತಾರೂಢ ನ್ಯಾಷನಲ್​ ಪೀಪಲ್ಸ್​ ಪಕ್ಷ (ಎನ್​ಪಿಪಿ) ಗೆಲುವು ಪಡೆದಿದೆ. ಉತ್ತರಾಖಂಡದ ಏಕೈಕ ಕ್ಷೇತ್ರದಲ್ಲಿ ಬಿಜೆಪಿ ಜಯದ ಮಾಲೆ ಕೊರಳಿಗೇರಿಸಿಕೊಂಡಿದೆ.


ಬಂಗಾಳದಲ್ಲಿ 'ದೀದಿ' ದರ್ಬಾರ್​: ಪಶ್ಚಿಮ ಬಂಗಾಳದ 6 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕ್ಲೀನ್​ಸ್ವೀಪ್​ ಮಾಡಿದೆ.


ಪಂಜಾಬ್​​ನ ನಾಲ್ಕು ಕ್ಷೇತ್ರಗಳಲ್ಲಿ ಆಡಳಿತಾರೂಢ ಆಮ್​ ಆದ್ಮಿ ಪಕ್ಷ (ಆಪ್​) ಮೂರರಲ್ಲಿ ಗೆಲುವು ಸಾಧಿಸಿದೆ. ಇನ್ನೊಂದರಲ್ಲಿ ಕಾಂಗ್ರೆಸ್​ ಜಯಿಸಿದೆ. ಸಿಕ್ಕಿಂನ 2 ಕ್ಷೇತ್ರಗಳಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಸಿಕೆಎಂ) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget