ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎನ್‌ಪಿಪಿ ಹಿಂತೆಗೆದುಕೊಂಡಿದೆ.
ಶಿಲ್ಲಾಂಗ್/ಇಂಫಾಲ್ : ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಭಾನುವಾರ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಈಶಾನ್ಯ ರಾಜ್ಯದಲ್ಲಿ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಎನ್‌ಪಿಪಿ ಅಸಮಾಧಾನ ವ್ಯಕ್ತಪಡಿಸಿದೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಎನ್‌ಪಿಪಿ ಪ್ರಸ್ತುತ 7 ಜನ ಶಾಸಕರನ್ನು ಹೊಂದಿದೆ ಮತ್ತು ಬಿಜೆಪಿ ತನ್ನ 32 ಶಾಸಕರೊಂದಿಗೆ ಸದನದಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿರುವುದರಿಂದ ಬೆಂಬಲ ಹಿಂತೆಗೆದುಕೊಳ್ಳುವಿಕೆಯು ಸರ್ಕಾರದ ಸ್ಥಿರತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೇಸರಿ ಪಾಳಯವು ನಾಗಾ ಪೀಪಲ್ಸ್ ಫ್ರಂಟ್ (NPF) ನ ಐವರು ಶಾಸಕರು ಮತ್ತು 6 JD(U) ಶಾಸಕರ ಬೆಂಬಲವನ್ನೂ ಹೊಂದಿದೆ.
ಕಳೆದ 17 ತಿಂಗಳುಗಳಿಂದ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಮೀಸಲಾತಿ ವಿವಾದಿಂದಾಗಿ ಹಿಂಸಾಚಾರ ಉಂಟಾಗಿದೆ. ಈ ಹಿಂದೆ ಉಂಟಾಗಿದ್ದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಹತೋಟಿಗೆ ತಂದಿತ್ತು. ಆದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿತ್ತು. ಕಳೆದ ಕೆಲವು ದಿನಗಳಲ್ಲಿ ಮಣಿಪುರದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಜನರು "ಅಪಾರವಾದ ನೋವನ್ನು ಅನುಭವಿಸುತ್ತಿದ್ದಾರೆ" ಎಂದು ಎನ್‌ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಕೊಂದಿದ್ದರಿಂದ ಆಕ್ರೋಶಗೊಂಡ ಜನರು, ನವೆಂಬರ್‌ನಲ್ಲಿ ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ಮಾಡಿದ ನಂತರ ಅನಿರ್ದಿಷ್ಟಾವಧಿ ಕರ್ಫ್ಯೂವನ್ನು ಬಿಗಿಗೊಳಿಸಲಾಗಿತ್ತು. ಹೀಗಿದ್ದರೂ, ಶನಿವಾರ ರಾತ್ರಿ ಹಿಂಸಾತ್ಮಕ ಪ್ರತಿಭಟನೆಯ ಹೊಸ ಘಟನೆಗಳು ನಡೆದವು.
ಮೂವರು ಬಿಜೆಪಿ ಶಾಸಕರ ನಿವಾಸಗಳಿಗೆ ಬೆಂಕಿ: ಸಿಎಂ ಎನ್ ಬಿರೇನ್ ಸಿಂಗ್ ಅವರ ಪೂರ್ವಜರ ನಿವಾಸಕ್ಕೆ ನುಗ್ಗುವ ಪ್ರತಿಭಟನಾಕಾರರ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದಾಗಿಯೂ, ಮೂವರು ಬಿಜೆಪಿ ಶಾಸಕರ ನಿವಾಸಗಳಿಗೆ ಬೆಂಕಿ ಹಚ್ಚಿದ್ದಾರೆ. ಅವರಲ್ಲಿ ಒಬ್ಬರು ಹಿರಿಯ ಸಚಿವರು ಮತ್ತು ಮತ್ತೊಬ್ಬರು ಇಂಫಾಲ್ ಕಣಿವೆಯ ಕಾಂಗ್ರೆಸ್ ಶಾಸಕರ ಮನೆ ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಷನಲ್ ಪೀಪಲ್ಸ್ ಪಾರ್ಟಿ ತಕ್ಷಣವೇ ಜಾರಿಗೆ ಬರುವಂತೆ ಮಣಿಪುರ ರಾಜ್ಯದಲ್ಲಿ ಬಿರೇನ್ ಸಿಂಗ್ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿದೆ" ಎಂದು ಪತ್ರದಲ್ಲಿ ತಿಳಿಸಿದೆ.
Post a Comment