ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

 


ಬೆಂಗಳೂರು: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ವಾರದ ಆರು ದಿನಗಳಲ್ಲಿ ಮೊಟ್ಟೆ ನೀಡುವ ಕಾರ್ಯಕ್ರಮದಲ್ಲಿ ಭಾರೀ ಅಕ್ರಮ ಬೆಳಕಿಗೆ ಬಂದಿದೆ. ಮಕ್ಕಳಿಗೆ ಮೊಟ್ಟೆಯನ್ನು ನೀಡದೆ, ಮೊಟ್ಟೆ ತಿನ್ನದ ಮಕ್ಕಳಿಗೆ ಆದ್ಯತೆಯ ಮೇರೆಗೆ ಬಾಳೆಹಣನ್ನೂ ನೀಡದೆ ಕೇವಲ ಶೇಂಗಾ ಚಿಕ್ಕಿ ನೀಡಿರುವ ಹಲವು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ನೀಡುವ ಕಾರ್ಯಕ್ರಮದ ಮೇಲೆ ಹೆಚ್ಚಿನ ನಿಗಾ ಇಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.


ಪಿಎಂ ಪೋಷಣ್‌ ಯೋಜನೆಯಡಿ ರಾಜ್ಯ ಸರಕಾರವು ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ನೀಡುತ್ತಿದೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಮತ್ತು ಚಿಕ್ಕಿ ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಜಿಂ ಪ್ರೇಮ್‌ಜೀ ಪ್ರತಿಷ್ಠಾನ (ಎಪಿಎಫ್)ವು 3 ವರ್ಷಗಳ ಕಾಲ ಮಕ್ಕಳಿಗೆ ವಾರದ 6 ದಿನ ಮೊಟ್ಟೆ ನೀಡಲು ಮುಂದೆ ಬಂದಿದೆ. ಇದರಿಂದ 40 ಲಕ್ಕಕ್ಕೂ ಹೆಚ್ಚು ಮಕ್ಕಳಿಗೆ ವಾರದ 6 ದಿನ ಮಧ್ಯಾಹ್ನದ ಬಿಸಿಯೂಟದ ಜತೆಗೆ ಒಂದು ಮೊಟ್ಟೆ ಲಭ್ಯವಾಗುತ್ತಿದೆ. ಅಂದರೆ ವರ್ಷಕ್ಕೆ 300 ಮೊಟ್ಟೆಗಳನ್ನು ನೀಡಲಾಗುತ್ತದೆ. 100 ಮೊಟ್ಟೆಗಳ ವೆಚ್ಚವನ್ನು ಸರಕಾರ ಭರಿಸಿದರೆ 200 ಮೊಟ್ಟೆಗಳ ವೆಚ್ಚವನ್ನು ಎಪಿಎಫ್ ಭರಿಸುತ್ತದೆ.

ಈ ಕಾರ್ಯಕ್ರಮ ಕಳೆದ ಸೆಪ್ಟಂಬರ್‌ನಿಂದ ಜಾರಿಯಾಗಿದೆ. ಆದರೆ ಹಲವು ಶಾಲೆಗಳಲ್ಲಿ ಮೊಟ್ಟೆ ವಿತರಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೊಟ್ಟೆಯ ಬದಲು ಚಿಕ್ಕಿ ನೀಡಿ ಅದರಲ್ಲೂ ನಿಗದಿತ ತೂಕಕ್ಕಿಂತ ಕಡಿಮೆ ತೂಕದ ಚಿಕ್ಕಿ ನೀಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲು ನಾಲ್ಕು ವಿಭಾಗದ 357 ಶಾಲೆಗಳಿಗೆ ಭೇಟಿ ನೀಡಿದ ಎಪಿಎಫ್ 66 ಶಾಲೆಗಳಲ್ಲಿ ಮೊಟ್ಟೆಯನ್ನು ಈವರೆಗೆ ವಿತರಿಸಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ತಾನು ಭೇಟಿ ನೀಡಿದ ಶಾಲೆಗಳಲ್ಲಿ ಶೇ. 64 ಮೊಟ್ಟೆ ಸ್ವೀಕರಿಸುವ ವಿದ್ಯಾರ್ಥಿಗಳಿದ್ದರೂ ಅವರಿಗೆ ಮೊಟ್ಟೆ ನೀಡದೆ ಚಿಕ್ಕಿ, ಬಾಳೆಹಣ್ಣು ನೀಡಲಾಗಿದೆ. ಹಾಗೆಯೇ ಮೊಟ್ಟೆ ತಿನ್ನದ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಬಾಳೆಹಣ್ಣು ನೀಡಬೇಕಾಗಿತ್ತು, ಆದರೆ ಬಾಳೆಹಣ್ಣು ನೀಡದೆ ಚಿಕ್ಕಿ ನೀಡಲಾಗಿದೆ. ಚಿಕ್ಕಿಯ ತೂಕ 35 ಗ್ರಾಂನಿಂದ 40 ಗ್ರಾಂ ಇರಬೇಕೆಂಬ ನಿಯಮವಿದ್ದರೂ ಅದನ್ನು ಮುರಿದು 30 ಗ್ರಾಂ ಗಿಂತ ಕಡಿಮೆ ತೂಕದ ಚಿಕ್ಕಿ ವಿತರಿಸಲಾಗಿದೆ ಎಂದು ಎಪಿಎಫ್ ಶಿಕ್ಷಣ ಇಲಾಖೆಗೆ ವರದಿ ನೀಡಿದೆ.

ಲೋಪವಾಗಿರುವುದು ಗಮನಕ್ಕೆ ಬಂದಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಆ್ಯಪ್‌ ಅಳವಡಿಕೆ ಮತ್ತು ದಿಢೀರ್‌ ಭೇಟಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ| ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.
98 ಅಧಿಕಾರಿಗಳಿಗೆ ನೋಟಿಸ್‌: ಅಕ್ರಮ ತಡೆಗೆ ನೋಟಿಸ್‌

ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ 50 ಬಿಇಒಗಳು ಮತ್ತು 48 ಪಿಎಂ ಪೋಷಣ್‌ನ ಸಹಾಯಕ ನಿರ್ದೇಶಕರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಜತೆಗೆ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು ಖಾತರಿ ಪಡಿಸಲು ಆ್ಯಪ್‌ ಅಭಿವೃದ್ಧಿ ಪಡಿಸಿ ಅದರಲ್ಲಿ ಮೊಟ್ಟೆ ವಿತರಣೆಯ ದೈನಂದಿನ ಚಿತ್ರ ಮತ್ತು ಮಾಹಿತಿ ಅಪ್‌ಡೇಟ್‌ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದರ ಜತೆಗೆ ಶಿಕ್ಷಣ ಇಲಾಖೆಯು ತನ್ನದೇ ಅದ ತಂಡಗಳನ್ನು ರಚಿಸಲಿದ್ದು ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ ಮೊಟ್ಟೆ ವಿತರಣೆಯ ಬಗ್ಗೆ ಪರಿಶೀಲನೆ ನಡೆಸಲಿದೆ.










Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget