ದೀಪಾವಳಿ ಬೆಳಕಿನ ಹಬ್ಬ. ಮನದೊಳಗಿನ ದ್ವೇಷ, ಅಸೂಯೆ, ಸ್ವಾರ್ಥದಂಥ ಕತ್ತಲೆಯನ್ನು ತೊಡೆದು, ಪ್ರೀತಿ, ಸಹನೆ, ವಿಶ್ವಾಸವೆಂಬ ಬೆಳಕನ್ನು ಬೆಳಗಿಸುವ ಹಬ್ಬ. ಇಂಥ ದೀಪಾವಳಿಯಲ್ಲಿ ಪಟಾಕಿ ಹಚ್ಚುವಾಗ ಅದರಲ್ಲಿಯೂ ಮಕ್ಕಳಿರುವ ಮನೆಯಲ್ಲಿ ತುಸು ಹೆಚ್ಚೇ ಕಾಳಜಿ ಮಾಡಬೇಕು.
ಎಣ್ಣೆ, ಬತ್ತಿ ಇರುವ ದೀಪವಾಗಲಿ, ಬಗೆ ಬಗೆಯ ಪಟಾಕಿಗಳಾಗಲಿ, ಸಿಹಿಯೇ ಆಗಲಿ ಮಕ್ಕಳಿಗೆ ಅಚ್ಚುಮೆಚ್ಚು. ಎಲ್ಲೆಲ್ಲೂ ಗೂಡುದೀಪಗಳು. ಸಾಲು ಸಾಲು ದೀಪಗಳನ್ನು ನೋಡುವಾಗ ಮಕ್ಕಳು ಇನ್ನಷ್ಟು ಉತ್ಸಾಹಿಗಳಾಗುತ್ತಾರೆ. ಇಂಥ ಸಮಯದಲ್ಲಿ ಅವರ ಆರೋಗ್ಯದ ಕಡೆಗೂ ಗಮನ ನೀಡುವುದು ಅತ್ಯಗತ್ಯ.
ಪಟಾಕಿಗಳು ಉತ್ಸಾಹವನ್ನು ಹೆಚ್ಚಿಸುವುದಲ್ಲದೇ ಬೆರಗಿನಲ್ಲಿಡುತ್ತವೆ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸದೇ ಹೋದರೆ ಅಪಾಯವೇ ಹೆಚ್ಚು. ಹಬ್ಬದ ಗಲಾಟೆಯ ನಡುವೆಯೂ ಮಕ್ಕಳನ್ನು ಪಟಾಕಿಗಳಿಂದ ಸುರಕ್ಷಿತವಾಗಿಡುವ ಬಗ್ಗೆಯೂ ಪೋಷಕರು ಕಾಳಜಿ ಮಾಡಬೇಕು.
ಸುರಕ್ಷಿತವಾಗಿಡುವುದು ಹೇಗೆ?
ದೊಡ್ಡವರ ಮೇಲ್ವಿಚಾರಣೆಯಲ್ಲಿ ಮಕ್ಕಳು ಪಟಾಕಿ ಹೊಡೆಯಬೇಕು. ಅದರಲ್ಲಿಯೂ ಸುಸುರ್‌ಬತ್ತಿ, ಭೂಚಕ್ರದಂಥ ಪಟಾಕಿಗಳು ಮಕ್ಕಳಿಗೆ ಒಳ್ಳೆಯದು. ಸ್ಫೋಟಿಸುವ ಪಟಾಕಿಗಳಿಂದ ಮಕ್ಕಳನ್ನು ಆದಷ್ಟು ದೂರವಿರಿಸಿ.
ಸ್ವಲ್ಪ ದೊಡ್ಡ ಮಕ್ಕಳು, ಸಣ್ಣ ಮಕ್ಕಳು ಸೇರಿ ಪಟಾಕಿ ಹೊಡೆಯುವಾಗ ಮನೆಯ ಹಿರಿಯ ಸದಸ್ಯರೊಬ್ಬರು ಅಲ್ಲಿರುವಂತೆ ನೋಡಿಕೊಳ್ಳಿ. ಸ್ಪಾರ್ಕ್ಸ‌್ರಗಳು ಹೆಚ್ಚಿನ ತಾಪಮಾನದಲ್ಲಿ ಸುಡುವುದರಿಂದ ಅವುಗಳಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಹಾಗಾಗಿ ಅವುಗಳ ಕಡೆಗೂ ಗಮನ ಹರಿಸಿ.
ದೀಪಾವಳಿ ಸಮಯದಲ್ಲಿ ಆದಷ್ಟು ಮಕ್ಕಳಿಗೆ ಸಿಂಥೆಟಿಕ್ ಬಟ್ಟೆಗಳನ್ನು ಹಾಕಬೇಡಿ. ಸಣ್ಣ ಕಿಡಿಯು ಬಹುಬೇಗ ಹೊತ್ತಿಕೊಳ್ಳುವುದರಿಂದ ಮಗುವಿನ ಬಟ್ಟೆ ಉತ್ತಮದ್ದಾಗಿರಲಿ. ಸಾಧ್ಯವಾದಷ್ಟು ಕಾಟನ್ ಬಟ್ಟೆಯನ್ನು ತೊಡಿಸಿ. ಪೂರ್ಣವಾಗಿ ಪಾದಗಳನ್ನು ಮುಚ್ಚುವ ಶೂ ಹಾಗೂ ಉದ್ದನೆಯ ತೋಳುಗಳಿರುವ ಬಟ್ಟೆಗಳನ್ನು ಮಕ್ಕಳಿಗೆ ಹಾಕಿ. ಇದರಿಂದ ಕಿಡಿಯು ಬಹುಬೇಗ ದೇಹವನ್ನು ಸೋಕದಂತೆ ತಡೆಯಬಹುದು.
ಅತಿಯಾಗಿ ಪಟಾಕಿಗಳನ್ನು ಹೇರಿಕೊಂಡಿರುವ ಅಂಗಡಿ, ಮುಂಗಟ್ಟುಗಳಿಂದ ದೂರವಿರುವಂತೆ ಹೇಳಿ. ಅದರಲ್ಲಿಯೂ ಪಟಾಕಿ ಹೊಡೆಯುವಾಗ ಯಾವ ಭಾಗದಲ್ಲಿದ್ದರೆ ಸುರಕ್ಷಿತ ಎಂಬುದನ್ನು ಮಕ್ಕಳಿಗೆ ಮಾರ್ಗದರ್ಶನ ಮಾಡಿ. ಪಟಾಕಿಗಳಿಂದ ಹೊರಸೂಸುವ ಹೊಗೆ ಮತ್ತು ರಾಸಾಯನಿಕಗಳಿಂದ ಮಕ್ಕಳ ಉಸಿರಾಟಕ್ಕೆ ತೊಂದರೆಯಾಗಬಹುದು. ವಿಶೇಷವಾಗಿ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ.
ಹೊಗೆಯಿಂದ ಹಾನಿ
ಪಟಾಕಿಗಳು ಹೊರಸೂಸುವ ಹೊಗೆಯಿಂದ ಮಕ್ಕಳ ಅದರಲ್ಲಿಯೂ ಎಳೆಯ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳು ಎಷ್ಟು ಸಮಯದವರೆಗೆ ಹೊಗೆಗೆ ದೇಹವನ್ನು ಒಡ್ಡುತ್ತಾರೆ ಎಂಬುದನ್ನು ಗಮನಿಸಿ, ಅದನ್ನು ನಿರ್ಬಂಧಿಸಲು ಪ್ರಯತ್ನಿಸಿ.
ತೆರೆದ ಪ್ರದೇಶಗಳಲ್ಲಿ, ಚೆನ್ನಾಗಿ ಗಾಳಿಯಾಡುವ ವಾತಾವರಣವನ್ನು ಪಟಾಕಿ ಹೊಡೆಯುವುದಕ್ಕೆ ಆಯ್ದುಕೊಳ್ಳಿ. ದೂರದಿಂದಲೇ ಪಟಾಕಿ ಹೊಡೆಯುವುದನ್ನು ವೀಕ್ಷಿಸುವ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿ. ಇದರಿಂದ ಅತಿಯಾದ ಹೊಗೆಗೆ ಒಡ್ಡಿಕೊಳ್ಳುವ
ಮಗುವಿಗೆ ಉಸಿರಾಟದ ಸಮಸ್ಯೆಗಳಿದ್ದರೆ, ಆಸ್ತಮಾ, ಅಲರ್ಜಿಯಂಥ ಆರೋಗ್ಯ ಸಮಸ್ಯೆಗಳಿದ್ದರೆ ಪಟಾಕಿಯಿಂದ ದೂರ ಇರಿಸುವುದು ಒಳ್ಳೆಯದು. ಪಟಾಕಿ ಹೊಡೆಯುವಾಗ ಮಾಸ್ಕ್ ಧರಿಸಿದರೆ ಪಟಾಕಿಯಲ್ಲಿರುವ ರಾಸಾಯನಿಕ ಕಣಗಳು ಹಾಗೂ ಹೊಗೆಯಿಂದ ತಪ್ಪಿಸಿಕೊಳ್ಳಬಹುದು.
ಕಿವಿಗಳೂ ಜಾಗ್ರತೆ
ಮಕ್ಕಳ ಶ್ರವಣಶಕ್ತಿ ಸೂಕ್ಷ್ಮವಾಗಿರುತ್ತದೆ. ಪಟಾಕಿಗಳನ್ನು ಸಿಡಿಸುವುದರಿಂದ ಅದರ ಶಬ್ದದಿಂದ ಅವರ ಶ್ರವಣಶಕ್ತಿಗೆ ತೊಂದರೆಯಾಗಬಹುದು. ಹಾಗೆ ಆಗದಂತೆ ನೋಡಿಕೊಳ್ಳಿ. ಅದರಲ್ಲಿಯೂ ದಟ್ಟ ಜನಸಂದಣಿಯ ನಡುವೆಯೂ ಕೇಳಿ ಬರುವ ಅಬ್ಬರದ ಸಂಗೀತ ಮಕ್ಕಳ ಶ್ರವಣಶಕ್ತಿಗೆ ತೊಂದರೆಯನ್ನು ಉಂಟು ಮಾಡಬಹುದು. ಸಾಮಾನ್ಯವಾಗಿ ಸಣ್ಣ ಮಕ್ಕಳು ದೊಡ್ಡ ಶಬ್ದಗಳಿಂದ ದೂರವಿರುವಂತೆ ಮಾಡಲು ಶಬ್ದ ರದ್ದು ಮಾಡುವ ಹೆಡ್‌ಫೋನ್ ಅಥವಾ ಇಯರ್‌ಪ್ಲಗ್‌ಗಳನ್ನು ಬಳಸಬಹುದು.
ಮೇಣದ ಬತ್ತಿ ಹಾಗೂ ಹಣತೆಗಳು ಮಕ್ಕಳಿಂದ ದೂರವಿದೆಯೇ ಎಂಬುದನ್ನು ಆಗಾಗ್ಗೆ ಖಚಿತಪಡಿಸಿಕೊಳ್ಳಿ. ಆಲಂಕಾರಿಕ ಬಟ್ಟೆಗಳಿಗೆ ಕಿಡಿ ಸೋಂಕದಂತೆ ದೂರವಿರಿಸಿ.
ಮಗು ಚಿಕ್ಕದಾಗಿದ್ದರೆ ಬ್ಯಾಟರಿ ಚಾಲಿತ ಮೇಣದ ಬತ್ತಿಗಳನ್ನು ಬಳಸಿ. ಇವುಗಳು ಹೆಚ್ಚು ಸುರಕ್ಷಿತವಾಗಿರುತ್ತವೆ.
ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಅಗತ್ಯವಾಗಿ ರಕ್ಷಣಾತ್ಮಕ ಕನ್ನಡಕಗಳು ಹಾಗೂ ಪಾದರಕ್ಷೆಗಳನ್ನು ತೊಡಿಸಿ. ತುರ್ತು ಪರಿಸ್ಥಿತಿಯಲ್ಲಿ ಸಹಾಯಕವಾಗುವಂತೆ ಒಂದು ಬಕೆಟ್ ನೀರನ್ನು ಸದಾ ಸಿದ್ಧವಾಗಿಟ್ಟುಕೊಳ್ಳಿ.
ಒಮ್ಮೆ ಹಾಳಾದ ಟ್ರ್ಯಾಕರ್‌ಗಳನ್ನು ಮತ್ತೆ ಹಚ್ಚಲು ಹೋಗಬೇಡಿ, ನೀರಿಗೆ ಎಸೆದುಬಿಡಿ.
Post a Comment