ವಾಷಿಂಗ್ಟನ್: ಯುಎಸ್ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಅವರು ಎಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರನ್ನು ಸರ್ಕಾರದ ದಕ್ಷತೆಯ ಇಲಾಖೆಯನ್ನು (DOGE) ಒಟ್ಟಿಗೆ ಮುನ್ನಡೆಸಲು ಆಯ್ಕೆ ಮಾಡಿದ್ದಾರೆ.
DOGE US ಸರ್ಕಾರಿ ಸಂಸ್ಥೆಯಲ್ಲ. ಮಂಗಳವಾರ ರಾತ್ರಿ(ನ 12) ಟ್ರಂಪ್ ತಮ್ಮ ಪ್ರಕಟಣೆಯಲ್ಲಿ, ”ಇಲಾಖೆಯು ಹಿಂದೆಂದೂ ನೋಡಿರದ ರೀತಿ ಸರ್ಕಾರದ ಹೊರಗಿನಿಂದ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಿದೆ. ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಗೆ ಚಾಲನೆ ನೀಡಲು, ಸರ್ಕಾರಕ್ಕೆ ಉದ್ಯಮಶೀಲತೆಯ ವಿಧಾನವನ್ನು ರಚಿಸಲು ವೈಟ್ ಹೌಸ್, ಆಫೀಸ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಬಜೆಟ್‌ನೊಂದಿಗೆ ಪಾಲುದಾರಿಕೆ ಮಾಡಲಿದೆ” ಎಂದು ಹೇಳಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಮಸ್ಕ್ ಮತ್ತು ರಾಮಸ್ವಾಮಿ ಅವರ ಕುರಿತು, “ಈ ಇಬ್ಬರು ಅದ್ಭುತ ಅಮೆರಿಕನ್ನರು ಒಟ್ಟಾಗಿ, ಸರ್ಕಾರದ ಅಧಿಕಾರಶಾಹಿಯನ್ನು ಕಿತ್ತೊಗೆಯಲು, ಹೆಚ್ಚುವರಿ ನಿಯಮಾವಳಿಗಳನ್ನು ಕಡಿತಗೊಳಿಸಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಫೆಡರಲ್ ಏಜೆನ್ಸಿಗಳನ್ನು ಪುನರ್ ರಚಿಸಲು ನನ್ನ ಆಡಳಿತಕ್ಕೆ ದಾರಿ ಮಾಡಿಕೊಡುತ್ತಾರೆ. ಅಮೆರಿಕವನ್ನು ಉಳಿಸಲು ಅತ್ಯಗತ್ಯ ಕ್ರಮ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಜುಲೈ 4, 2026 ರೊಳಗೆ ಅವರ ಕೆಲಸವು ಮುಕ್ತಾಯವಾಗಲಿದೆ. ಸ್ವಾತಂತ್ರ್ಯದ ಘೋಷಣೆಗೆ ಸಹಿ ಹಾಕಿದ 250 ನೇ ವಾರ್ಷಿಕೋತ್ಸವದಂದು ಚಿಕ್ಕ ಮತ್ತು ಹೆಚ್ಚು ಪರಿಣಾಮಕಾರಿ ಸರಕಾರವು ದೇಶಕ್ಕೆ ಉಡುಗೊರೆಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
Post a Comment