ನವದೆಹಲಿ: 'ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನರಿಗೆ ವಿಧಿಸಿರುವ ಹೆಚ್ಚುವರಿ ನೀರಿನ ಬಿಲ್ ಮತ್ತು ವಿದ್ಯುತ್ ಬಿಲ್ ಅನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರವಾಲ್ ಭರವಸೆ ನೀಡಿದ್ದಾರೆ.
ವಿಶ್ವಕರ್ಮ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಬೇರೆ ಪಕ್ಷದ ನಾಯಕರಂತೆ ನಾನಲ್ಲ. ಕಳೆದ 10 ವರ್ಷಗಳಿಂದ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಉನ್ನತ ಶಿಕ್ಷಣ ಪಡೆದಿದ್ದೇನೆ.
ನನಗೆ ಹೇಗೆ ಕೆಲಸ ಮಾಡಬೇಕೆಂದು ತಿಳಿದಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಾನು ಜೈಲಿನಲ್ಲಿದ್ದಾಗ ಲೆಫ್ಟಿನೆಂಟ್ ಗವರ್ನರ್ ಅವರು ನಗರಾಡಳಿತವನ್ನು ನಡೆಸುತ್ತಿದ್ದು, ನೀರು ಮತ್ತು ವಿದ್ಯುತ್ ಬಿಲ್‌ಗಳನ್ನು ಹೆಚ್ಚಳ ಮಾಡಿರುವುದು ಗಮನಕ್ಕೆ ಬಂದಿದೆ' ಎಂದು ತಿಳಿಸಿದ್ದಾರೆ.
`ಯೋಚನೆ ಮಾಡಿಬೇಡಿ, ಈಗ ನಾನು ಮುಖ್ಯಮಂತ್ರಿ ಹುದ್ದೆಯಿಂದ ದೂರವಿದ್ದೇನೆ. ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಎಎಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನೀರು ಮತ್ತು ವಿದ್ಯುತ್ ಬಿಲ್‌ಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ' ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಮ್ಮ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸುವುದರ ಜತೆಗೆ ಶಿಕ್ಷಣದಿಂದ ಆರೋಗ್ಯದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದೆ ಎಂದು ಅವರು ವಿವರಿಸಿದ್ದಾರೆ.
ನಮ್ಮ ಪಕ್ಷಕ್ಕೆ (ಎಎಪಿ) ಮತ ಹಾಕಿ ಎಂದು ನಾನು ಹೇಳುತ್ತಿಲ್ಲ. ಕೆಲಸ ಮಾಡುವವರಿಗೆ ಮತ ನೀಡಿ. ಬಿಜೆಪಿಯವರು ನಿಮ್ಮ ಮಕ್ಕಳಿಗಾಗಿ ಏನು ಮಾಡಿದ್ದಾರೆ ಎಂದು ಕೇಳಿ, ದೆಹಲಿ ಜನತೆಗಾಗಿ ಅವರು ಮಾಡಿರುವ ಒಂದೇ ಒಂದು ಕೆಲಸವನ್ನು ತೋರಿಸಲಿ ಎಂದು ಕೇಜ್ರವಾಲ್ ಸವಾಲು ಹಾಕಿದ್ದಾರೆ.
Post a Comment