ಉಪ ಚುನಾವಣೆ: ಬೊಂಬೆನಗರಿಯಲ್ಲಿ ಶಾಂತಿಯುತ ವೋಟಿಂಗ್​​: ಅತಿ ಹೆಚ್ಚು ಶೇ 88.80 ರಷ್ಟು ಮತದಾನ

 ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಅಂದಾಜು ಶೇ.88.80ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.




ರಾಮನಗರ: ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ಶಾಂತಿಯುವಾಗಿ ನಡೆಯಿತು. ಬುಧವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಕ್ಷೇತ್ರದಲ್ಲಿ ಒಟ್ಟು 2,06,866 ಮತದಾರರು ತಮ್ಮ ಹಕ್ಕು ಚಲಾಯಿಸಿದರು. 276 ಮತಗಟ್ಟೆಯಲ್ಲಿ ಮತದಾನ ನಡೆಯಿತು.

ಚನ್ನಪಟ್ಟಣದಲ್ಲಿ 1,00,501 ಪುರುಷ ಮತದಾರರು ಹಾಗೂ 1,06,362 ಮಹಿಳಾ ಮತದಾರರು ಮತ್ತು ಇತರೆ 3 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,06,866 ಮತಗಳು ಚಲಾವಣೆಯಾಗಿವೆ. ಈ ಮೂಲಕ ಅಂದಾಜು ಶೇ.88.80ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಯಶವಂತ್ ವಿ.ಗುರುಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತ್ತು ಶೀಲಾ ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಯೋಗೇಶ್ಬರ್, ''ಈ ಚುನಾವಣೆಯಲ್ಲಿ ಜನರು ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳು ವರ್ಕ್ ಆಗುತ್ತಿದೆ. ನೀರಾವರಿ ಅಭಿವೃದ್ಧಿ ಆದಾಗ ಕ್ರೆಡಿಟ್​​ಗೆ ಬಹಳ ಜನರು ಇರುತ್ತಾರೆ. ಕುಮಾರಸ್ವಾಮಿ ಮೊದಲು ಸಿಎಂ ಆಗಿದ್ದಾಗ ನೀರಾವರಿ ವಿಚಾರವೇ ಇರಲಿಲ್ಲ. ಆದರೆ, ಯೋಜನೆ ಯಶಸ್ವಿ ಆದ ನಂತರ ಎಲ್ಲರೂ ಇರ್ತಾರೆ'' ಎಂದು ದೇವೇಗೌಡರು - ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಕುಮಾರಸ್ವಾಮಿ ಬಗ್ಗೆ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿ, ''ಅದು ನನಗೆ ಗೊತ್ತಿಲ್ಲ, ಅದ್ಯಾವುದು ಈ ಚುನಾವಣೆಯಲ್ಲಿ ವರ್ಕ್ ಆಗಲ್ಲ'' ಎಂದರು.

ಆಂಜನೇಯಸ್ವಾಮಿ ಸನ್ನಿಧಿಗೆ ನಿಖಿಲ್ ಭೇಟಿ: ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಪ್ರಸಿದ್ದ ಕೆಂಗಲ್ ಆಂಜನೇಯಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವಾರ್ಡ್ ನಂಬರ್ ಮೂರಕ್ಕೆ ಭೇಟಿ ನೀಡಿದ ನಿಖಿಲ್, ಕಾರ್ಯಕರ್ತರೊಂದಿಗೆ ಕೆಲವು ಹೊತ್ತು ಮಾತುಕತೆ ನಡೆಸಿದರು. ಭೇಟಿಯ ವೇಳೆ ಕಾರ್ಯಕರ್ತರ ಮನೆಯಲ್ಲಿ ಒಬ್ಬಟ್ಟು ಸೇವಿಸಿದರು.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ನಿಖಿಲ್, ''ಪ್ರಾರಂಭಿಕ ಹಂತದಲ್ಲಿ ಅಭ್ಯರ್ಥಿ ಆಗುವ ಬಗ್ಗೆ ಭಾವನೆಗಳು ಇರಲಿಲ್ಲ. ಆದರೆ ಕೆಲ ರಾಜಕೀಯ ಬೆಳವಣಿಗೆ ಹಿನ್ನೆಲೆ ಪಕ್ಷದ ಭಾವನೆಗಳು ಬೆಲೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಿಸೋಕೆ ಎನ್‌ಡಿಎ ನಾಯಕರು ತೀರ್ಮಾನ ಮಾಡಿ ನಾನು ಸ್ಪರ್ಧೆ ಮಾಡಿದೆ. ಕಳೆದ 18 ದಿನಗಳ ಕಾಲ ನಿರಂತರವಾಗಿ ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಪಕ್ಷದ ಪರವಾಗಿ ಹಳ್ಳಿ ಹಳ್ಳಿಯಲ್ಲಿ ನನ್ನ ಪರ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಕಳೆದ ಆರುವರೆ ವರ್ಷಗಳ ಕಾಲ ಕುಮಾರಣ್ಣ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಮತದಾರರು ಅವರ ಹೃದಯದಲ್ಲಿ ಒಂದು ಸ್ಥಾನ ಕೋಡ್ತಾರೆ ಎಂಬ ವಿಶ್ವಾಸ ಇದೆ'' ಎಂದು ತಿಳಿಸಿದರು.

''ಮತದಾರರ ವಿಶ್ವಾಸ ಮೀರಿ ಸೇವೆ ಮಾಡುವ ದೃಢ ನಿರ್ಧಾರ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಯುವ ಸಮುದಾಯ ಬಹಳ ದೊಡ್ಡ ಮಟ್ಟದಲ್ಲಿದೆ. ನಾನು ಹಳ್ಳಿಗಳಿಗೆ ಹೋದ ಸಂದರ್ಭದಲ್ಲಿ ಒಬ್ಬ ಯುವಕ ಬಂದಿದ್ದಾನೆ ಎಂದು ಅಣ್ಣನೂ ತಮ್ಮನೂ ಬಂದಿದ್ದಾನೆ ಅಂತ ಭಾವನೆಯಿಂದ ನನ್ನ ಜತೆ ಪ್ರಚಾರದಲ್ಲಿ ಹೆಜ್ಜೆ ಹಾಕಿದ್ದಾರೆ'' ಎಂದರು.

''ಹಿಂದಿನ ಎರಡು ಚುನಾವಣೆಯಲ್ಲಿ ನಾನು ಯಾವ ರೀತಿ ನಡೆದುಕೊಂಡು ಬಂದಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾವ ಹಂತದಲ್ಲೂ ವಿರೋಧ ಪಕ್ಷಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ, ನ್ನನ ಕಲ್ಪನೆಯಲ್ಲಿ ಚನ್ನಪಟ್ಟಣ ಹೇಗಿರಬೇಕು ಎಂಬುದನ್ನು ನಾನು ಚರ್ಚೆ ಮಾಡಿದ್ದೇನೆ. ನನ್ನ ಬೆನ್ನಿಗಿರೋದು ದೇವೇಗೌಡರು ಮತ್ತು ಕುಮಾರಣ್ಣನ ಕೊಡುಗೆ, ಅದು ನನ್ನನ್ನು ಗೆಲುವಿನ ದಡ ಸೇರಿಸುವ ವಿಶ್ವಾಸ ಇದೆ'' ಎಂದು ನಿಖಿಲ್​ ವಿಶ್ವಾಸ ವ್ಯಕ್ತಪಡಿಸಿದರು.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget