ಆರೋಗ್ಯ ಇಲಾಖೆಯು ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಜನರಿಗೆ ಹೊರೆಯಾಗದಂತೆ ಹೆಚ್ಚಳ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು: ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕವನ್ನು ಬಹಳ ವರ್ಷಗಳ ನಂತರ ಹೆಚ್ಚಿಸಲಾಗಿದೆ. ಜನರಿಗೆ ಹೊರೆಯಾಗದಂತೆ ಅಲ್ಪ ಪ್ರಮಾಣದಲ್ಲಿ ಸೇವಾ ಶುಲ್ಕ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ಸೇವಾ ಶುಲ್ಕ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಪರಿಷ್ಕರಣೆ ಒಂದು ಪ್ರಕ್ರಿಯೆ. ಸೇವಾ ಶುಲ್ಕ ಆಸ್ಪತ್ರೆ ಸಮಿತಿಗೆ ಹೋಗುತ್ತದೆ. ಸ್ಥಳೀಯ ಶಾಸಕರೇ ಆ ಸಮಿತಿ ಅಧ್ಯಕ್ಷರಾಗಿದ್ದು, ಆ ಹಣವನ್ನು ಆಸ್ಪತ್ರೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಆಸ್ಪತ್ರೆ ಅಭಿವೃದ್ಧಿಗೆ ಶುಲ್ಕ ಪರಿಷ್ಕರಣೆ: ಆಸ್ಪತ್ರೆಗಳಲ್ಲಿ ಬೇರೆ ಸೇವೆ ನೀಡಬೇಕು. ಆಸ್ಪತ್ರೆಯ ಅಭಿವೃದ್ಧಿಗಾಗಿ ಅಲ್ಪ ಪ್ರಮಾಣದಲ್ಲಿ ಅಂದರೆ 10 ರೂನಿಂದ 15 , 20 ರೂನಿಂದ 25 ರೂಗೆ ಏರಿಸಲಾಗಿದೆ. ಜೊತೆಗೆ ಬಹಳ ವರ್ಷದ ನಂತರ ಹೆಚ್ಚಳ ಮಾಡಲಾಗಿದ್ದು, ಇದು ಬಡವರಿಗೆ ತೊಂದರೆ ಆಗುವ ರೀತಿಯಲ್ಲೂ ಕೂಡ ಇದು ಇಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವುದಿಲ್ಲ. ಅದೇ ಆಸ್ಪತ್ರೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದ ಹಣವನ್ನು ಆಯಾ ಆಸ್ಪತ್ರೆಗಳ ARS ಸಮಿತಿಗಳು ಚರ್ಚೆ ನಡೆಸಿ ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡುತ್ತವೆ. ಆಸ್ಪತ್ರೆಯ ARS Fund ಹೆಸರಲ್ಲಿ ಅನುದಾನ ಲಭ್ಯವಿರುತ್ತದೆ. ಆಸ್ಪತ್ರೆಯ ಸ್ವಚ್ಛತೆ, ದುರಸ್ತಿ ಕಾರ್ಯಗಳು ಸೇರಿದಂತೆ ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ಬಳಕೆ ಮಾಡಲಾಗುತ್ತದೆ ಎಂದರು.
ಬಿಜೆಪಿ ಟೀಕೆಗೆ ಪ್ರತಿಕ್ರಿಯೆ: ಇದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿಗಳಿಗೆ ತಳುಕು ಹಾಕಿ ನೋಡುವುದು ಸರಿಯಲ್ಲ. ಬಿಜೆಪಿಯವರಿಗೆ ಏನು ಹೇಳಬೇಕು ಅಂತಾ ಗೊತ್ತಾಗದೇ ಎಲ್ಲವನ್ನೂ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪಡಿತರ ಚೀಟಿ ರದ್ದು ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಕೆಲವು ಕಡೆ ಬಡತನ ರೇಖೆಗಿಂತ ಕಡಿಮೆ ಇರುವ ಶೇ.80/90 ಪರ್ಸೆಂಟ್ ರದ್ದಾಗಿರುವ ಬಗ್ಗೆ ಆರೋಪ ಮಾಡಲಾಗುತ್ತಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಅದು ಸಾಧ್ಯವಿಲ್ಲ. ಅನರ್ಹ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಸೇರಿದಂತೆ ಇತರ ಮಾನದಂಡ ಆದರಿಸಿ ಕಾರ್ಡ್ ರದ್ದು ಪಡಿಸಲಾಗಿದೆ ಅಂತ ಸಿಎಂ ಸ್ಪಷ್ಟ ಪಡಿಸಿದ್ದಾರೆ. ಕೆಲವು ತಪ್ಪು ಆಗಿದೆ ಅದನ್ನು ಸರಿಸಡಿಸುತ್ತೇವೆ. ತಪ್ಪಾಗಿರೋದು ಸರಿಪಡಿಸಲೇ ಬಾರದು ಅನ್ನೋದು ಯಾವ ಲಾಜಿಕ್. ಕೇಂದ್ರ ಸರ್ಕಾರ 5.80 ಕೋಟಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ವಿಚಾರ ಯಾಕೆ ಬಿಜೆಪಿ ಮಾತಾಡುತ್ತಿಲ್ಲ ? ಸರ್ಕಾರದ ಹಣ ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು. ಗೃಹ ಲಕ್ಷ್ಮಿ ಯೋಜನೆಗೂ ಪಡಿತರಕ್ಕೂ ಯಾವುದೇ ಸಂಬಂಧ ಇಲ್ಲ. ಕೆಲವು ಪಡಿತರ ರದ್ದು ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗಿದೆ. ಅದನ್ನು ಸರ್ಕಾರ ಸರಿ ಮಾಡುತ್ತೆ. ವ್ಯವಸ್ಥೆ ಸುಧಾರಣೆ ಮಾಡುವಾಗ ಸ್ಪಲ್ಪ ಸಮಸ್ಯೆ ಬರುತ್ತೆ, ಅದನ್ನು ಸರಿ ಪಡಿಸುತ್ತೇವೆ ಎಂದರು.
ನಬಾರ್ಡ್ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ನಬಾರ್ಡ್‌ನಲ್ಲಿ 2500 ಕೋಟಿ ಕಡಿತವಾಗಿದೆ. ಇದು ಪ್ರಮುಖ ವಿಚಾರ. ಪ್ರಲ್ಹಾದ್ ಜೋಶಿ ಇದರ ಬಗ್ಗೆ ಮಾತಾಡಲಿ. ಕೇಂದ್ರ ಸಚಿವರ ಜೊತೆ ಮಾತಾಡುತ್ತೇನೆ ಅಂತ ಹೇಳಲು ಅವರಿಗೆ ಬಾಯಿ ಬರುದಿಲ್ಲ. ಕೇಂದ್ರಕ್ಕೆ ಬಿಜೆಪಿಯವರು ಗುಲಾಮರಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Post a Comment