ಶ್ರೀ ವಿಜಯ ದಾಸರು ಭಾಗ 2'ರ ಮುಹೂರ್ತ ಸಮಾರಂಭ ನೆರವೇರಿದೆ.
ಶ್ರೀ ವಿಜಯ ದಾಸರು ಭಾಗ 2 ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ತೇಜಸ್ವಿನಿ ಅನಂತ್ ಕುಮಾರ್ ಅವರು ಕ್ಯಾಮರಾ ಚಾಲನೆ ಮಾಡಿದರು.
ಇತ್ತೀಚೆಗಷ್ಟೇ ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಹಾಗೂ ಖ್ಯಾತ ಗಮಕ ಕಲಾವಿದರಾದ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಹೂರ್ತ ಸಮಾರಂಭದ ನಂತರ ಮಾತನಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ತಮ್ಮ ಚಿತ್ರದ ಕುರಿತು ಮಾತನಾಡಿದರು.
ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ, ದಾಸವರೇಣ್ಯ ಶ್ರೀ ವಿಜಯದಾಸರು ಭಾಗ 2 ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದಗಳು. ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇನ್ನು ನಾಲ್ಕು ತಿಂಗಳಲ್ಲಿ ಸಿನಿಮಾ ಸಿದ್ದವಾಗಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಒಂಬತ್ತು ಹಾಡುಗಳು ಚಿತ್ರದಲ್ಲಿರುತ್ತದೆ. ತ್ರಿವಿಕ್ರಮ ಜೋಶಿ, ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತ ಬಾಗೇವಾಡಿ ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದರು.
ಬಳಿಕ ನಿರ್ಮಾಪಕ ತ್ರಿವಿಕ್ರಮ ಜೋಶಿ ಮಾತನಾಡಿ, ನಾನು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾನೇ ವಿಜಯದಾಸರ ಪಾತ್ರ ನಿರ್ವಹಿಸುತ್ತಿದ್ದೇನೆ. ಭಾಗ ಒಂದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಎರಡನೇ ಭಾಗಕ್ಕೆ ಚಾಲನೆ ದೊರಕಿದೆ. ನನ್ನದಲ್ಲದ ಕ್ಷೇತ್ರಕ್ಕೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನನ್ನನ್ನು ಎಳೆದು ತಂದಿದ್ದಾರೆ. ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ.
ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ ತಿಳಿಸಲು ಇಚ್ಛಿಸುತ್ತೇನೆ. ನವೆಂಬರ್ 12, ದೇಶ ಕಂಡ ಸಜ್ಜನ ರಾಜಕಾರಣಿ ದಿ. ಅನಂತ್ ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ಹೋದ ದಿನ. ಅವರು ನನ್ನ ಗುರುಗಳು. ಇಂದು ಅವರ ಶ್ರೀಮತಿ ಅವರು ಬಂದಿದ್ದಾರೆ. ಅವರ ಜೊತೆಗೆ ಅನಂತ್ ಕುಮಾರ್ ಅವರ ಕುರಿತಾದ ಚಿತ್ರ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸುತ್ತೇವೆ. ನನ್ನಂತಹ ಸಾಕಷ್ಟು ಅನಂತ್ ಕುಮಾರ್ ಅಭಿಮಾನಿಗಳು ನನ್ನೊಂದಿಗಿರುತ್ತಾರೆ. ಇಂದು ಪೂಜ್ಯ ಆಚಾರ್ಯರು ಸಹ ಈ ಚಿತ್ರ ಆರಂಭಿಸುವಂತೆ ಹೇಳಿ ಆಶೀರ್ವದಿಸಿದ್ದಾರೆ ಎಂದರು.
ಈ ಸಿನಿಮಾದಲ್ಲಿ ಗೋಪಾಲದಾಸರ ಪಾತ್ರದಲ್ಲಿ ಪ್ರಭಂಜನ ದೇಶಪಾಂಡೆ ಅಭಿನಯಿಸಿದರೆ, ವಿಜಯದಾಸರ ಪತ್ನಿ ಹರಳಮ್ಮನವರ ಪಾತ್ರದಲ್ಲಿ ಶ್ರೀಲತಾ ಬಾಗೇವಾಡಿ ನಟಿಸುತ್ತಿದ್ದಾರೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ.
Post a Comment