ನ.4 ರಂದು ಬೃಹತ್ ಪ್ರತಿಭಟನೆ - : ಬಿಜೆಪಿ ಮಂಡಲ ಸಮಿತಿ ಹೇಳಿಕೆ
ರಾಜ್ಯದಲ್ಲಿ ರೈತರ ಭೂಮಿಗಳು ವಕ್ಫ್ ಆಸ್ತಿಯಾಗಿ ಮಾರ್ಪಾಡಾಗುವ ಹುನ್ನಾರ ನಡೆಯುತಿದೆ, ಇದರಿಂದ ರಾಜ್ಯದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಇದರ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಬಿಜೆಪಿ ಹೋರಾಟ ಹಮ್ಮಿಕೊಂಡಿದ್ದು ನ.4ರಂದು ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಎಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಸರಕಾರ ಕೃಷಿ ಭೂಮಿಯನ್ನು ವಕ್ಫ್‌ಗೆ ನೀಡಿ ತುಷ್ಠೀಕರಣ ಮಾಡುತಿದೆ, ಹಲವು ಕೃಷಿಕರಿಗೆ ನೋಟೀಸ್ ಮಾಡಲಾಗಿದೆ. ಇದರಿಂದ ಕೃಷಿಕರಿಗೆ ಅನ್ಯಾಯ ಆಗಿದೆ.
ಇದರ ವಿರುದ್ಧ ರೈತರ ಪರವಾಗಿ ಬಿಜೆಪಿ ರಾಜ್ಯ ವ್ಯಾಪಿ ಹೋರಾಟ ನಡೆಸಲಿದೆ ಎಂದು ಹೇಳಿದರು. ಸುಳ್ಯ ವಿಧಾನಸಭಾ ಕ್ಷೇತ್ರದ 76 ಗ್ರಾಮಗಳಲ್ಲಿ ಬಿಜೆಪಿ ವತಿಯಿಂದ ಎರಡು ತಂಡ ರಚನೆ ಮಾಡಿ ಎಲ್ಲಾ ಕಡತ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ವಕ್ಫ್ ಆಸ್ತಿ ಸಂಬಂಧಿಸಿ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲುಮುಂದಾಗಿರುವುದು ಸ್ವಾಗತಾರ್ಹ ಎಂದು ವಳಲಂಬೆ ಹೇಳಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಯಾ ಪೈಸೆ ಅನುದಾನ ಬಾರದೇ ಜನರು ಬವಣೆ ಅನುಭವಿಸುತಿದೆ. ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಕುಂಠಿತ ಆಗಿದೆ. ಗ್ಯಾರಂಟಿ ಯಿಂದ ಸರಕಾರ ಅಧೋಗತಿಗೆ ತಲುಪಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಸರಕಾರ ಸಂಪೂರ್ಣ ವಿಫಲವಾಗಿದೆ. ಕೃಷಿಕರಿಗೆ ಸಹಾಯ ಧನ, ಶೂನ್ಯ ಬಡ್ಡಿ ಸಾಲ ವಿಳಂಬ ಆಗುತಿದೆ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ, ಅಜ್ಜಾವರದ ಮೇನಾಲದಲ್ಲಿ ಜಾರ ಎಂಬ ಪ್ರದೇಶ ಇತ್ತು. ಬರಬರುತ್ತಾ ಅಲ್ಲಿ ಜಾಗದ ಅತಿಕ್ರಮಣವಾಯಿತು.
ಇತ್ತೀಚೆಗೆ ಜಾಗ ವಶಪಡಿಸಿಕೊಳ್ಳಲು ಅವರು ಮುಂದಾದಾಗ ನಾವು ವಿರೋಧ ಮಾಡಿದ್ದೆವು. ಬಳಿಕ ವಕ್ಫ್ ಬೋರ್ಡ್ ಗೆ ಆ ಜಾಗ ನೋಂದಣಿ ಮಾಡುತಿದ್ದಾರೆಂಬ ಸೂಚನೆ ಬಂತು. ನಾವು ವಿಚಾರಿಸಿದಾಗ ಕಡತ ಎ.ಸಿ. ಕಚೇರಿಗೆ ಹೋಗಿತ್ತು. ಬಳಿಕ ದಾಖಲೆ ಪಡೆದು ನಾವು ಹೈಕೋರ್ಟ್ ಮೊರೆ ಹೋದೆವು.
ಅಲ್ಲಿ ವಿಚಾರಣೆ ನಡೆದು ಆ ಕಡತವನ್ನು ವಜಾ ಮಾಡುವಂತೆ ಆದೇಶ ಬಂತು. ಸೂಕ್ತ ಸಮಯದಲ್ಲಿ ನಾವು ನ್ಯಾಯಾಲಯಕ್ಕೆ ಹೋದುದರಿಂದ ಆ ಜಾಗ ಉಳಿಯಿತು. 2021ರಲ್ಲಿಯೂ ವಕ್ಫ್ ಮಂಡಳಿಯಿಂದ ಆ ಜಾಗದ ಕುರಿತು ಅದೇ ರೀತಿಯ ಮತ್ತೊಂದು ಆದೇಶ ಪ್ರತಿ ಬಂದಿದೆ. ಈ ಕುಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.
Post a Comment