ಮಹಾರಾಷ್ಟ್ರ ಫಲಿತಾಂಶಗಳು ಮೋದಿ, ಅದಾನಿ ಕೈವಾಡದ ಫಲಿತಾ೦ಶ ಒಪ್ಪುವುದಿಲ್ಲ: ರಾವುತ್

 


ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು ಭಾರಿ ವಿಜಯದೊಂದಿಗೆ ಪುನಃ ಸರ್ಕಾರ ರಚನೆಗೆ ಮುಂದಾಗುತ್ತಿರುವಂತೆಯೇ, ಈ ಫಲಿತಾಂಶವನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿ ನಿರ್ಧರಿಸಿದ್ದಾರೆ, ಇದನ್ನು ಒಪ್ಪುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಕೆಂಡ ಕಾರಿದ್ದಾರೆ.

ಇಂದು (ಶನಿವಾರ) ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಂದಿರುವ ವರದಿಗಳ ಅನುಸಾರ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮುಂದಾಳತ್ವದ ಮಹಾಯುತಿ ಮೈತ್ರಿಕೂಟವು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವುತ್, ಭಾರಿ ಪ್ರಮಾಣದಲ್ಲಿ ಹಣ ಬಲ ಪ್ರಯೋಗಿಸಲಾಗಿದೆ. ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಗೌತಮ್ ಅದಾನಿ ಅವರು ಚುನಾವಣಾ ಫಲಿತಾಂಶವನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಮ್ಮ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟಕ್ಕೆ 75 ಸ್ಥಾನಗಳನ್ನೂ ನೀಡಲಾಗದ ಈ ಫಲಿತಾಂಶ ಸಂದೇಹಾಸ್ಪದ. 56 ಸ್ಥಾನಗಳಲ್ಲಿ ಏಕನಾಥ ಶಿಂದೆ ಗುಂಪು, 40 ಸ್ಥಾನಗಳಲ್ಲಿ ಅಜಿತ್ ಪವಾರ್ ಬಣ, 125 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ಸಾಧ್ಯವೇ ಇಲ್ಲ. ಒಂದು ಪಕ್ಷವು ಮಹಾರಾಷ್ಟ್ರದಲ್ಲಿ 200 ಸ್ಥಾನಗಳನ್ನು ದಾಟುವುದೇ ಸಾಧ್ಯವಿಲ್ಲ. ಹೀಗಿರುವಾಗ ನಾವು ಈ ಫಲಿತಾಂಶವನ್ನು ಒಪ್ಪುವುದಿಲ್ಲ. ಮಹಾರಾಷ್ಟ್ರದ ಪ್ರಜೆಗಳು ಅಪ್ರಾಮಾಣಿಕರಲ್ಲ, ಆದರೆ ಬಿಜೆಪಿ ನೇತೃತ್ವದ ಮಹಾಯುತಿ ಪ್ರಾಮಾಣಿಕವಾಗಿ ಗೆಲುವು ಸಾಧಿಸಿಲ್ಲ ಎಂದು ರಾವುತ್ ವಾಗ್ದಾಳಿ ನಡೆಸಿದ್ದಾರೆ.

ಇದು ಜನಾದೇಶವಲ್ಲ, ಈ ಫಲಿತಾಂಶವನ್ನು ಗೌತಮ್ ಅದಾನಿ ತಂಡವೇ ರೂಪಿಸಿದೆ ಎಂದು ರಾವುತ್ ಕಿಡಿಕಾರಿದ್ದಾರೆ. ಅವರು (ಅದಾನಿ) ನಮ್ಮ ಕ್ಷೇತ್ರಗಳನ್ನು ಕಸಿದುಕೊಂಡಿದ್ದಾರೆ. ಇದು ಜನಾದೇಶವಲ್ಲ. ಜನರೂ ಈ ಫಲಿತಾಂಶವನ್ನು ಒಪ್ಪುವುದಿಲ್ಲ. ಇದು ಜನರ ನಿರ್ಣಯವಲ್ಲ. ಫಲಿತಾಂಶ ಪೂರ್ತಿ ಹೊರಬರಲಿ, ನಾವು ಆಮೇಲೆ ಮಾತನಾಡುತ್ತೇವೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಣ ಲೆಕ್ಕ ಮಾಡುವ ಯಂತ್ರ ಸ್ಥಾಪಿಸಲಾಗಿದೆ ಎಂದು ರಾವುತ್ ದೂರಿದ್ದಾರೆ.


ಮತ್ತೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ಆಗಬೇಕು. ಮಹಾರಾಷ್ಟ್ರದ ಫಲಿತಾಂಶವು ಜನಾಭಿಪ್ರಾಯದ ಮತಗಳಲ್ಲವೇ ಅಲ್ಲ. ಈ ಫಲಿತಾಂಶವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದವರು 'ಎಕ್ಸ್' ಖಾತೆಯಲ್ಲಿಯೂ ಬರೆದುಕೊಂಡಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget