ಐಬಿಆರ್‌ಟಿ ಸ್ಥಾಪನೆ ಜತೆ ಮಂಗಳೂರನ್ನು ಜಾಗತಿಕ ಸಾಮರ್ಥ್ಯದ ಕೇಂದ್ರವಾಗಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಕ್ಯಾ. ಚೌಟ ಮನವಿ



ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ ಗಾರ್ಡ್‌ ಅಕಾಡೆಮಿ ಸ್ಥಾಪನೆ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜತೆಗೆ ವಿಲೀನ ಸೇರಿ ದಕ್ಷಿಣ ಕನ್ನಡದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಪ್ರಸ್ತಾವಿತ ಪ್ರಮುಖ ಯೋಜನೆಗಳನ್ನು ಆದಷ್ಟು ಬೇಗ ಕಾರ್ಯಗತಗೊಳಿಸುವಂತೆ ಕೋರಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.


ದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿ ಮಾಡಿರುವ ಸಂಸದ ಕ್ಯಾ. ಚೌಟ, ಈ ಹಿಂದೆ ನಿರ್ಮಲಾ ಸೀತಾರಾಮನ್‌ ರಕ್ಷಣಾ ಸಚಿವರಾಗಿದ್ದಾಗ ಮಂಗಳೂರಿಗೆ ಮಂಜೂರು ಮಾಡಿದ್ದ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಬಾಕಿಯಿರುವ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಆರ್ಥಿಕ ಸಂಕಷ್ಟ ಸೇರಿ ನಾನಾ ಸವಾಲು ಎದುರಿಸುತ್ತಿರುವ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ ಈ ಮಾರ್ಗದ ರೈಲು ಸೇವೆ ಹಾಗೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಅಲ್ಲದೆ, ಮಂಗಳೂರನ್ನು ಜಾಗತಿಕ ಸಾಮರ್ಥ್ಯದ ಸೆಂಟರ್(ಜಿಸಿಸಿ) ಆಗಿ ಪರಿವರ್ತಿಸಿ ಜಾಗತಿಕ ಹೂಡಿಕೆ ಆಕರ್ಷಣೆಗೆ ಪೂರಕವಾಗುವ ಮೂಲಸೌಕರ್ಯ ಅಭಿವೃದ್ಧಿ, ಮಾನವ ಸಂಪನ್ಮೂಲ-ಕೌಶಲ್ಯಾಭಿವೃದ್ಧಿಗೆ ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಬ್ಯಾಂಕ್‌ಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ಮಂಗಳೂರಿನಲ್ಲಿ ಬ್ಯಾಂಕಿಂಗ್‌ ಸಂಶೋಧನಾ ಹಾಗೂ ತರಬೇತಿ ಸಂಸ್ಥೆ(ಐಬಿಆರ್‌ಟಿ) ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ.  



ಜಿಸಿಸಿಯಾಗಿ ಪರಿವರ್ತನೆಗೆ ವಿಪುಲ ಅವಕಾಶ

ಮಂಗಳೂರಿನಲ್ಲಿ ಅತ್ಯಾಧುನಿಕ ಬಂದರು ವ್ಯವಸ್ಥೆ ಹಾಗೂ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಮೂಲಕ ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯಿದೆ. ಜತೆಗೆ ಮಂಗಳೂರಿನಲ್ಲಿ 200ಕ್ಕೂ ಅಧಿಕ ಕಂಪೆನಿಗಳಲ್ಲಿ 20 ಸಾವಿರ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಮಂಗಳೂರು ಪ್ರಮುಖ ಟಾಲೆಂಟ್‌ ಪೂಲ್‌ ಆಗಿ ಬೆಳೆಯುತ್ತಿದ್ದು, ವಿಶ್ವದರ್ಜೆ ಶಿಕ್ಷಣ ಸಂಸ್ಥೆಗಳು, ಐಟಿ ಕಂಪೆನಿಗಳು, ಆರೋಗ್ಯ ಸೇವೆ, ಇಂಧನ ಉತ್ಪಾದನೆ ಹೀಗೆ ಎಲ್ಲ ರೀತಿಯ ಪರಿಸರ ಸ್ನೇಹಿ ವಾತಾವರಣ ಹಾಗೂ ಮೂಲಸೌಕರ್ಯ ಹೊಂದಿರುವ ಹಿನ್ನಲೆ ಮಂಗಳೂರು ನಗರವನ್ನು ಗ್ಲೋಬಲ್‌ ಕೆಪಾಸಿಟಿ ಸೆಂಟರ್‌ ಆಗಿ ಪರಿವರ್ತಿಸುವುದಕ್ಕೆ ಪೂರಕ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಜಾಗತಿಕ ಸಾಮರ್ಥ್ಯದ ಸೆಂಟರ್‌ಗಳಿಗೆ ತೆರಿಗೆ ರಿಯಾಯಿತಿ, ಕೌಶಲ್ಯಾಭಿವೃದ್ಧಿ, ಜಿಸಿಸಿ ಕೇಂದ್ರೀಕೃತ ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಚೌಟ ಅವರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.


ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ ಸದ್ಯ ರಕ್ಷಣಾ ಸಚಿವಾಲಯದ ಮುಂದಿದೆ. ರಾಜ್ಯ ಸರ್ಕಾರ ಕೂಡ ಈ ಯೋಜನೆಗೆ ಕೆಂಜಾರು ಬಳಿ 158 ಎಕರೆ ಜಮೀನನ್ನು ಕೆಐಎಡಿಬಿನಿಂದ ಗುರುತಿಸಲಾಗಿದೆ. ಒಟ್ಟು 1385 ಕೋಟಿ ರೂ.ಗಳ ಈ ಯೋಜನೆ ಅಂತಿಮ ಹಂತದ ಪರಿಶೀಲನೆಯಲ್ಲಿದೆ. ಹೀಗಾಗಿ, ಕರಾವಳಿ ಭದ್ರತೆ ಹೆಚ್ಚಳ ಸೇರಿ ಮಂಗಳೂರಿನ ಆರ್ಥಿಕ-ಸಾಮಾಜಿಕ ಅಭಿವೃದ್ಧಿ ಉತ್ತೇಜಿಸುವ ಈ ಕೋಸ್ಟ್‌ ಗಾರ್ಡ್‌ ಅಕಾಡೆಮಿ ಸ್ಥಾಪನೆಗೆ ಕೇಂದ್ರದಿಂದ ಬಾಕಿಯಿರುವ ಪ್ರಕ್ರಿಯೆ ಪೂರ್ಣಗೊಳಿಸಿ ಅದನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಕ್ಯಾ. ಚೌಟ ಅವರು ಆಗ್ರಹಿಸಿದ್ದಾರೆ.


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇತ್ತೀಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳು, ಹೊಸ ಪ್ರಸ್ತಾವನೆಗಳ ಬಗ್ಗೆ ಸಂಸದರು ಚರ್ಚೆ ನಡೆಸಿದ್ದರು. ಅದರಂತೆ ಇದೀಗ ದೆಹಲಿಯಲ್ಲಿ ಅವರನ್ನು ಭೇಟಿಯಾಗಿ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ಸವಿವರವಾದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.


ಬಾಕ್ಸ್

ಮಂಗಳೂರಿಗೆ ಏಕೆ ಬೇಕು ಐಬಿಆರ್‌ಟಿ ಸಂಸ್ಥೆ (ಬ್ಯಾಂಕಿಂಗ್‌ ಸಂಶೋಧನಾ ಹಾಗೂ ತರಬೇತಿ ಸಂಸ್ಥೆ)

ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌ನಂಥ ಪ್ರಮುಖ ಬ್ಯಾಂಕ್‌ಗಳು ಹುಟ್ಟಿರುವ ನಗರ ಮಂಗಳೂರು. ಇಂಥಹ ಬ್ಯಾಂಕ್‌ಗಳ ತವರೂರು ಎಂದು ಕರೆಸಿಕೊಂಡಿರುವ ಮಂಗಳೂರಿನಲ್ಲಿ ಐಬಿಆರ್‌ಟಿ ಸಂಸ್ಥೆ ಸ್ಥಾಪಿಸುವುದು ಈ ಭಾಗದ ಬ್ಯಾಂಕಿಂಗ್‌ ವಲಯದ ಪ್ರತಿಭೆಗಳ ಉತ್ತೇಜನೆಗೆ ಸಹಕಾರಿಯಾಗಲಿದೆ. ಅಲ್ಲದೆ, ವಾಯು ಹಾಗೂ ಜಲ ಮಾರ್ಗದ ಮೂಲಕ ಬೆಂಗಳೂರು, ಮುಂಬೈ, ಗೋವಾ ಮುಂತಾದ ನಗರಗಳಿಗೆ ಹೆಚ್ಚಿನ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಜತೆಗೆ ಕೌಶಲ್ಯಾಧಾರಿತ ಹಣಕಾಸು, ಮ್ಯಾನೇಜ್‌ಮೆಂಟ್‌ ಹಾಗೂ ತಾಂತ್ರಿಕ ಪರಿಣತ ಪದವೀಧರರನ್ನು ಸಿದ್ಧಗೊಳಿಸುವ ಸುರತ್ಕಲ್‌ನ ಎನ್‌ಐಟಿಕೆ, ಮಣಿಪಾಲ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿರುವ ಕಾರಣ ಇಲ್ಲಿ ಐಬಿಆರ್‌ಟಿ ಸ್ಥಾಪಿಸುವುದು ಹೆಚ್ಚು ಸೂಕ್ತ ಮತ್ತು ಅವಶ್ಯಕ ಕೂಡ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget