ವಾರಾಂತ್ಯಕ್ಕೆ ಚಂಡಮಾರುತವಾಗಿ ಪರಿವರ್ತನೆ ಸಾಧ್ಯತೆ
ಬೆಂಗಳೂರು: ಬಂಗಾಳ ಉಪ ಸಾಗರದ ಆಗ್ನೆಯ ಭಾಗದಲ್ಲಿ ಸರ್ಕ್ಯೂಲೇಷನ್ ಸೃಷ್ಟಿಯಿಂದಾಗಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುರುವಾರದವರೆಗೆ ತುಂತುರು ಮಳೆಯಾಗಲಿದೆ. ವಾಯುಭಾರ ಕುಸಿತದಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಸೃಷ್ಟಿಯಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗಿದ್ದರೆ, ಉಳಿದೆಡೆ ತುಂತುರು ಮಳೆಯಾಗಿದೆ. ಜತೆಗೆ ಹಗಲಿನ ತಾಪಮಾನ 2-3 ಡಿಗ್ರಿ ಸೆ. ಕುಸಿತ ಕಂಡಿದ್ದು, ಬೀದರ್‌ನಲ್ಲಿ ಅತಿ ಕಡಿಮೆ ಉಷ್ಣಾಂಶ 12 ಡಿಗ್ರಿ ಸೆ. ದಾಖಲಾಗಿದೆ. ಬುಧವಾರವೂ ತುಂತುರು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡಲ್ಲಿ ಚಂಡಮಾರುತ ಸೃಷ್ಟಿಯಾಗಬಹುದು. ಈ ಸನ್ನಿವೇಶ ಸೃಷ್ಟಿಗೆ ವಾರಾಂತ್ಯದವರೆಗೂ ಕಾಯಬೇಕಾಗುತ್ತದೆ. ಈ ಪರಿಸ್ಥಿತಿಯಿಂದ ನವೆಂಬರ್ ಅಂತ್ಯದವರೆಗೂ ಕನಿಷ್ಠ ತಾಪಮಾನ ಕುಸಿತ ಉಂಟಾಗಿ ಚಳಿ ವಾತಾವರಣ ಕಾಣಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 13-15 ಡಿಗ್ರಿ ಸೆ. ಹಾಗೂ ಬೆಂಗಳೂರಿನಲ್ಲಿ 17-18 ಡಿಗ್ರಿ ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Post a Comment