ಸಂಸದ ಕ್ಯಾ. ಚೌಟ ಅವರಿಂದ ಕೃಷಿ ಸಚಿವ ಶಿವರಾಜ್ ಚೌವಾಣ್ ಭೇಟಿ ಮಾಡಿ ಮನವಿ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ ಬಾಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವಾಣ್ ಅವರನ್ನು ಭೇಟಿಯಾಗಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಅಧಿವೇಶದ ಹಿನ್ನಲೆ ನವದೆಹಲಿಯಲ್ಲಿರುವ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡದಲ್ಲಿ ಅಡಿಗೆ ಬೆಳೆಗಾರರನ್ನು ತೀವ್ರವಾಗಿ ಬಾಧಿಸಿರುವ ಅಡಿಕೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗದ ಗಂಭೀರತೆಯನ್ನು ಕೃಷಿ ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಸಂಸದರು ಇತ್ತೀಚೆಗಷ್ಟೇ ಎಲೆಚುಕ್ಕೆ ಹಾಗೂ ಹಳದಿ ಎಲೆರೋಗದಿಂದ ಸಂಕಷ್ಟದಲ್ಲಿರುವ ಅಡಿಕೆ ಕೃಷಿಕರ ನೆರವಿಗೆ ಧಾವಿಸುವಂತೆ ಕೋರಿ ಕೃಷಿ ಸಚಿವರು ಹಾಗೂ ವಾಣಿಜ್ಯ ಸಚಿವರಿಗೆ ಪತ್ರ ಬರೆದಿದ್ದರು. ಇದೀಗ ಕ್ಯಾ. ಚೌಟ ಅವರು ಖುದ್ದು ಕೃಷಿ ಸಚಿವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡದಲ್ಲಿರುವ ಅಡಿಕೆ ಕೃಷಿಕರನ್ನು ಎಲೆಚುಕ್ಕೆ ಹಾಗೂ ಹಳದಿ ಎಳೆ ರೋಗದಿಂದ ಪಾರು ಮಾಡುವುದಕ್ಕೆ ಶಾಶ್ವತ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಅತಿವೃಷ್ಟಿ, ಪ್ರತಿಕೂಲ ಹವಾಗುಣ ಮುಂತಾದ ಕಾರಣಗಳಿಂದಾಗಿ ಅಡಿಕೆ ಬೆಳೆಗೆ ನಿರಂತರವಾಗಿ ರೋಗಬಾಧೆ ಕಾಣಿಸಿಕೊಂಡು ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದ ಅಡಿಕೆ ಕೃಷಿಕರ ಆದಾಯ ಕುಸಿದು ಆರ್ಥಿಕವಾದ ಸವಾಲುಗಳು ಎದುರಾಗುತ್ತಿರುವ ಬಗ್ಗೆ ಐಸಿಎಆರ್ ವರದಿ ಈಗಾಗಲೇ ಎಚ್ಚರಿಸಿದೆ. ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿ. ಮಾಹಿತಿ ಪ್ರಕಾರ, ದ.ಕ.ದಲ್ಲಿ ಸುಮಾರು 24 ಹೆಕ್ಟೇರ್ ಅಡಿಕೆ ಬೆಳೆ ಹಾನಿಗೀಡಾಗಿದೆ. ಅಲ್ಲದೆ, ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನೆಗೆ ಸಂಬಂಧಿಸಿದ ಐಎಆರ್‌ಸಿ ಸಂಸ್ಥೆ ಕೂಡ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದಿರುವುದು ಎಂದು ಗುರುತಿಸಿರುವುದು ಕೂಡ ಬೆಳೆಗಾರರ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಹೀಗಾಗಿ, ಸಂಕಷ್ಟದಲ್ಲಿರುವ ಜಿಲ್ಲೆಯ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸುವಂತೆ ಕ್ಯಾ. ಚೌಟ ಮನವಿ ಮಾಡಿದ್ದಾರೆ.
ಕಾಫಿಯನ್ನು ಪರ್ಯಾಯ ಬೆಳೆಯಾಗಿ ಪ್ರೋತ್ಸಾಹಿಸಿ
ದಕ್ಷಿಣ ಕನ್ನಡದ ಹವಾಗುಣವು ಕಾಫಿ ಬೆಳೆಗೆ ಪೂರಕವಾಗಿದ್ದು, ಇಲ್ಲಿ ಕಾಫಿ ಕೃಷಿಗೆ ವಿಪುಲ ಅವಕಾಶಗಳಿವೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಕೂಡ ಇದನ್ನು ಮಲೆನಾಡಿನಂತೆ ದ.ಕ.ದಲ್ಲಿಯ ಕಾಫಿ ಬೆಳೆಯನ್ನು ವಾಣಿಜ್ಯವಾಗಿ ಬೆಳೆಯುವುದಕ್ಕೆ ಇರುವ ಸಾಮರ್ಥ್ಯದ ಬಗ್ಗೆ ಹೇಳಿದೆ. ಆದರೆ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಕಾಫಿ ಬೆಳೆಗೆ ಸಿಗುವ ಪ್ರೋತ್ಸಾಹ, ತಾಂತ್ರಿಕ ನೆರವು ಅಥವಾ ಕಾಫಿ ಬೆಂಬಲಿತ ಸಂಸ್ಥೆಗಳಿಂದ ಸಿಗುತ್ತಿಲ್ಲ. ಹೀಗಾಗಿ, ಕಾಫಿ ಬೋರ್ಡ್ ಮೂಲಕ ದಕ್ಷಿಣ ಕನ್ನಡ ಭಾಗದಲ್ಲಿಯೂ ಕಾಫಿ ಬೆಳೆಗಾರರನ್ನು ಉತ್ತೇಜಿಸುವುದಕ್ಕೆ ಸೂಕ್ತ ತಾಂತ್ರಿಕ ಮಾರ್ಗದರ್ಶನ, ಸಬ್ಸಿಡಿ, ಗುಣಮಟ್ಟದ ಸಸಿ ಒದಗಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವರನ್ನು ಒತ್ತಾಯಿಸಿದ್ದಾರೆ.
Post a Comment