ಚುನಾವಣಾ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟದಂತೆ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಹಾಸನ: ಯಾರೂ ಕೂಡ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ ಎಂದು ಚನ್ನಪಟ್ಟಣ ಕ್ಷೇತ್ರದ ಎನ್ಡಿಎ ಅಭ್ಯರ್ಥಿ, ಜೆಡಿಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಯುವಕರಲ್ಲಿ ಮನವಿ ಮಾಡಿಕೊಂಡರು. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶಕ್ಕೆ ದಿನಗಣನೆ ಹಿನ್ನೆಲೆ ಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸೀಪುರದ ವಿವಿಧ ದೇವಾಲಯಕ್ಕೆ ಪತ್ನಿ ರೇವತಿ, ಪುತ್ರ ಅವ್ಯಾನ್ ಜೊತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಬೆಟ್ಟಿಂಗ್ನಿಂದ ಎಷ್ಟೋ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚುನಾವಣೆಯ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟಬೇಡಿ. ಫೋನ್ ಸ್ವಿಚ್ ಆಫ್ ಮಾಡಿ ಮಲಗಿಬಿಡಿ, ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ಮಾಧ್ಯಮದ ಮೂಲಕ ನಿಮ್ಮಲ್ಲಿ ಮನವಿ ಮಾಡುವೆ. ಎಲ್ಲದಕ್ಕೂ ದೇವರಿದ್ದಾನೆ. ಆರಾಮಾಗಿ ಮಲಗಿ ಎಂದರು.
ಎಲ್ಲರ ಬೆಂಬಲ ಸಿಕ್ಕಿದ್ದರಿಂದ ಗೆಲುವಿನ ವಿಶ್ವಾಸ ಮೂಡಿದೆ: ಜನರ, ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ. ಮಾಜಿ ಸಚಿವರು, ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನ ನನ್ನ ಚುನಾವಣೆಗಾಗಿ ದುಡಿದಿದ್ದಾರೆ. ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ನನ್ನ ಹೃದಯದಲ್ಲಿ ಸಂಪೂರ್ಣ ಗೆಲುವಿನ ವಿಶ್ವಾಸವಿದೆ. ದೇವೇಗೌಡರು, ಕುಮಾರಣ್ಣ 1200 ಕೋಟಿ ಅನುದಾನ ತಂದು ಚನ್ನಪಟ್ಟಣದ ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಕೊಡುತ್ತೇನೆ. ಉದ್ಯೋಗ ಸೃಷ್ಟಿ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪತ್ನಿ ರೇವತಿ, ಪುತ್ರ ಅವ್ಯಾನ್ ಜತೆ ಮೊದಲು ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ದೇವಿರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ಅವರು, ಆ ಬಳಿಕ ಹೊಳನರಸೀಪುರ ತಾಲೂಕಿನ ಹರದನಹಳ್ಳಿಯ ದೇವೇಶ್ವರ ದೇಗುಲಕ್ಕೆ ಭೇಟಿ ನೀಡಿ ಮನೆ ದೇವರಿಗೆ ಪೂಜೆ ನೆರವೇರಿಸಿದರು. ಅವರೊಂದಿಗೆ ಶಾಸಕ ಸ್ವರೂಪ್ ಇದ್ದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಮತದಾನ ಇದೇ ನವೆಂಬರ್ 13 ರಂದು ನಡೆದಿತ್ತು. ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ ಪಿ ಯೋಗೇಶ್ವರ್ ಅಖಾಡದಲ್ಲಿದ್ದು, ಅವರ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದೆ. ನ. 23 ರಂದು ಫಲಿತಾಂಶ ಹೊರಬೀಳಲಿದೆ.
Post a Comment