ಫೆಂಗಲ್ ಚಂಡಮಾರುತದ ಎಫೆಕ್ಟ್ನಿಂದಾಗಿ ಚೆನ್ನೈನಲ್ಲಿ ಬೆಳಗ್ಗೆಯಿಂದಲೇ ಭಾರಿ ಮಳೆ ಸುರಿಯುತ್ತಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದಾರೆ.
ಚೆನ್ನೈ(ತಮಿಳುನಾಡು) : ಫೆಂಗಲ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಬೆಳಗ್ಗೆಯಿಂದಲೂ ಭಾರಿ ಗಾಳಿ ಸಹಿತ ಮಳೆಯಾಗುತ್ತಿದೆ. ಹೀಗಾಗಿ, ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಆಡಳಿತ ತಿಳಿಸಿದೆ.
ಚೆನ್ನೈನ ವಿಮಾನ ನಿಲ್ದಾಣವನ್ನು ಮುಚ್ಚಿದ್ದರಿಂದ ವಿಮಾನ ನಿಲ್ದಾಣಕ್ಕೆ ಬಂದ ಎಲ್ಲಾ ಪ್ರಯಾಣಿಕರು ಬಾಡಿಗೆ ಕಾರಿನಲ್ಲಿ ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಜಮಾಯಿಸಿದ್ದರಿಂದ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಮನೆಗೆ ತೆರಳಲಾಗದೇ ಕಷ್ಟಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಬಾಡಿಗೆ ಕಾರುಗಳಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ ಆಗಮನ ಪ್ರದೇಶ ಮತ್ತು ಅಂತಾರಾಷ್ಟ್ರೀಯ ಟರ್ಮಿನಲ್ ಆಗಮನ ಪ್ರದೇಶಕ್ಕೆ ಬಸ್‌ಗಳನ್ನು ಕಳುಹಿಸಲಾಗುವುದು ಎಂದು ಮುನ್ಸಿಪಲ್ ಸಾರಿಗೆ ನಿಗಮ ಘೋಷಿಸಿದೆ. ವಿಮಾನ ನಿಲ್ದಾಣದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದರಿಂದ ವಿಮಾನ ನಿಲ್ದಾಣ ಪ್ರಾಧಿಕಾರದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಸಿಟಿ ಬಸ್‌ಗಳು: ಅದರಲ್ಲೂ ಕಿಲಂಪಾಕ್ಕಂ, ಕೊಯಂಬೇಡು, ಚೆನ್ನೈ ಪ್ಯಾರಿಸ್ ಕಾರ್ನರ್ ಮೊದಲಾದ ಸ್ಥಳಗಳಿಗೆ ತೆರಳುವ ಸಿಟಿ ಬಸ್‌ಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡಿವೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದ ಟರ್ಮಿನಲ್ಗೆ ಯಾವುದೇ ಸಿಟಿ ಬಸ್‌ಗಳ ಪ್ರವೇಶಕ್ಕೆ ಅನುಮತಿಸಲಾಗುವುದಿಲ್ಲ.
ಚಂಡಮಾರುತವು ಕರಾವಳಿಯನ್ನು ದಾಟಿ ಮಳೆ ಕಡಿಮೆಯಾಗುವವರೆಗೆ ಈ ಸಿಟಿ ಬಸ್‌ಗಳು ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ 500ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಒಂದೇ ಸ್ಥಳದಲ್ಲಿ ತಂಗಿದ್ದರು.
ಪ್ರಯಾಣಿಕರಿಗೆ ಆಹಾರ ಸೇರಿದಂತೆ ಸೌಲಭ್ಯ : ವಿಮಾನ ನಿಲ್ದಾಣಗಳಲ್ಲಿ ತಂಗುವ ಪ್ರಯಾಣಿಕರಿಗೆ ಆಹಾರ ಸೇರಿದಂತೆ ಸೌಲಭ್ಯಗಳನ್ನು ಒದಗಿಸುವುದಾಗಿ ಆಯಾ ಖಾಸಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಭರವಸೆ ನೀಡಿವೆ ಎಂಬುದು ತಿಳಿದುಬಂದಿದೆ.
Post a Comment